ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಲೋಕದ ಪ್ರಮುಖ ನಟ ಹಾಗೂ ರಾಜಕೀಯ ಮುಖಂಡ ಕಮಲ್ ಹಾಸನ್, ಇತ್ತೀಚೆಗೆ ಸಿನಿಮಾಗಳಿಗಿಂತಲೂ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ, ನಟ ಸೂರ್ಯ ಅವರ ಅಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಶಿಕ್ಷಣದ ಶಕ್ತಿಯ ಬಗ್ಗೆ ಮಾತನಾಡುತ್ತಾ, “ಈಗ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಕೇವಲ ಶಿಕ್ಷಣದಿಂದ ಮಾತ್ರ ಗೆಲ್ಲಬಹುದು. ಸರಪಳಿಗಳನ್ನು ಮುರಿಯುವ ಶಕ್ತಿ ಶಿಕ್ಷಣದಲ್ಲಿದೆ. ಸರ್ವಾಧಿಕಾರಿ ಹಾಗೂ ಸನಾತನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹೇಳಿಕೆ ಬಹುತೇಕ ವಲಯಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿತು. ವಿಶೇಷವಾಗಿ ತಮಿಳುನಾಡು ಬಿಜೆಪಿ ಮುಖಂಡರು ಕಮಲ್ ಹಾಸನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಅವರ ಸಿನಿಮಾಗಳ ಬಿಡುಗಡೆಯನ್ನು ತಡೆಗಟ್ಟಬೇಕೆಂದು ಆಗ್ರಹಿಸಿದರು. ಈ ವಿವಾದದ ತೀವ್ರತೆಯ ನಡುವೆ, ತಮಿಳು ಟಿವಿ ನಟ ರವಿಚಂದ್ರನ್ ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕಮಲ್ ಹಾಸನ್ ವಿರುದ್ಧ ತೀವ್ರ ಶಬ್ದಪ್ರಯೋಗ ಮಾಡಿ, ಕೊಲೆ ಬೆದರಿಕೆ ನೀಡಿದರೆಂಬ ಆರೋಪ ಕೇಳಿಬಂದಿದೆ.
ಈ ಹೇಳಿಕೆ ಹಿನ್ನೆಲೆಯಲ್ಲಿ, ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನಿಧಿ ಮಯಂ ಕಾರ್ಯಕರ್ತರು ಚೆನ್ನೈ ಪೊಲೀಸರಿಗೆ ದೂರು ಸಲ್ಲಿಸಿ, ಬೆದರಿಕೆ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದಾರೆ.
ಕಮಲ್ ಹಾಸನ್‌ಗೆ ವಿವಾದ ಹೊಸದಲ್ಲ. ಕಳೆದ ಹಲವು ದಶಕಗಳಲ್ಲಿ ಅವರು ವಿವಿಧ ಸಂದರ್ಭಗಳಲ್ಲಿ ತಮ್ಮ ಮಾತುಗಳಿಂದ ಚರ್ಚೆಗೆ ಕಾರಣರಾಗಿದ್ದಾರೆ. ಅವರ ‘ತೇವರ್ ಮಗನ್’, ‘ಹೇ ರಾಮ್’ ಮೊದಲಾದ ಚಿತ್ರಗಳು ಬಿಡುಗಡೆಯಾಗುವ ಸಮಯದಲ್ಲೇ ದೊಡ್ಡ ಮಟ್ಟದ ಚರ್ಚೆ ಹಾಗೂ ವಿರೋಧಕ್ಕೆ ಗುರಿಯಾಗಿದ್ದವು. 2019ರ ಚುನಾವಣಾ ಪ್ರಚಾರದ ವೇಳೆ, ಸ್ವಾತಂತ್ರ್ಯ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂಬ ಹೇಳಿಕೆ ನೀಡಿದ್ದರೂ ಕೂಡಾ ಅದೇ ಸಮಯದಲ್ಲಿ ಭಾರಿ ವಿವಾದ ಉಂಟಾಗಿತ್ತು.