ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿವಿ ಕೇಳದ ಮತ್ತು ಮೂಕ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ ದುರುಳರಿಗೆ 24 ಗಂಟೆಯೊಳಗೆ ಪೊಲೀಸರು ಗುಂಡೇಟು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಸೋಮವಾರ ಮನೆಗೆ ಹಿಂದಿರುಗುತ್ತಿದ್ದಾಗ ವಿಶೇಷಚೇತನ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಜಿಲ್ಲೆಯ ಉನ್ನತ ಅಧಿಕಾರಿಗಳ ಮನೆಗಳಿಂದ ಕೆಲವು ಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಸಿಸಿಟಿವಿ ಕ್ಯಾಮೆರಾಗಳು ಆಫ್ ಆಗಿರುವುದು ಕಂಡುಬಂದಿದೆ. ಘಟನೆ ನಡೆದ 24 ಗಂಟೆಗಳ ಒಳಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಿಳೆ ತನ್ನ ಮಾವನ ಮನೆಯಿಂದ ಬಲರಾಂಪುರ ಜಿಲ್ಲೆಯ ಮನೆಗೆ ಹೋಗುತ್ತಿದ್ದಾಗ, ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಇಬ್ಬರು ಪುರುಷರು ಅತ್ಯಾಚಾರ ಎಸಗಿದ್ದಾರೆ. ಮೂಕಿಯಾಗಿದ್ದರಿಂದ ಮಹಿಳೆ ಸಹಾಯಕ್ಕೆ ಕೂಗಿಕೊಳ್ಳಲು ಸಾಧ್ಯವಾಗಲಿಲ್ಲ.
ಒಂದು ಗಂಟೆಯ ನಂತರವೂ ಮಹಿಳೆ ಮನೆಗೆ ವಾಪಸ್ ಹೋಗದಾಗ, ಕುಟುಂಬದವರು ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಪೊಲೀಸ್ ಠಾಣೆಯ ಬಳಿಯ ಹೊಲದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆ. ಮಹಿಳೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.