ಹೊಸದಿಗಂತ ಬೀದರ್:
ಅಪ್ರಾಪ್ತ ವಿಕಲಚೇತನ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿ, ಅತ್ಯಾಚಾರವೆಸಗಿದ ಕಾಮುಕನಿಗೆ ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಯಶವಂತ ತಾವರೆ ಅವರು ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
ಹುಮನಾಬಾದ್ ತಾಲ್ಲೂಕಿನ ಜಲಸಂಗಿ ನಿವಾಸಿ ವೆಂಕಟ ಲಕ್ಷ್ಮಣ ಶಿಕ್ಷೆಗೊಳಗಾದ ಆರೋಪಿ. 2022ರ ಜೂನ್ ನಲ್ಲಿ ಈತನು ಅಪ್ರಾಪ್ತ ಬಾಲೆ ಮೇಲೆ ಅತ್ಯಾಚಾರವೆಸಗಿದ್ದನು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಹುಮನಾಬಾದ್ ಸಿಪಿಐ ಶರಣಬಸಪ್ಪ ಕೋಡ್ಲಾ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ತಾವರೆ ಅವರು ಎಲ್ಲ ಹೇಳಿಕೆ, ಸಾಕ್ಷ್ಯಗಳ ಆಧಾರದಲ್ಲಿ ವೆಂಕಟನಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಜೀವಾವಧಿ ಶಿಕ್ಷೆ, 50 ಸಾವಿರ ರೂ.ದಂಡ ವಿಧಿಸಿ ತೀರ್ಪು ಕೊಟ್ಟಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಸವಂತರೆಡ್ಡಿ, ಸಂತೋಷಕುಮಾರ ಸಿದ್ದೇಶ್ವರ ಅವರು ವಾದಿಸಿದ್ದರು.