ಬನವಾಸಿ:
ಇಲ್ಲಿಯ ರಥಬೀದಿ ನಿವಾಸಿಯಾಗಿದ್ದ ಬನವಾಸಿಯ ಹಿರಿಯ ಮುತ್ಸದ್ದಿ ಟಿ.ಜಿ.ನಾಡಿಗೇರ(91) ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ಸಂಜೆ ನಿಧನರಾದರು.
ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದ ಇವರು ಬನವಾಸಿ ವ್ಯವಸ್ಥಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಬನವಾಸಿ ಗ್ರಾಮ ಪಂಚಾಯತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ಹಲವಾರು ಸಂಘ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಇವರು ಹಾಸ್ಯ ಕವಿ ಎಂದೇ ಗುರುತಿಸಿಕೊಂಡಿದ್ದರು.
ಮೃತರು 6 ಪುತ್ರರು, 6 ಪುತ್ರಿಯರು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಹಿರಿಯರಾದ ಟಿ.ಜಿ.ನಾಡಿಗೇರ ಅವರ ನಿಧನ ಸುದ್ದಿ ಕೇಳಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮೃತರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು. ಶಾಸಕ ಶಿವರಾಮ ಹೆಬ್ಬಾರ್, ಬನವಾಸಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗಜಾನನ ಗೌಡ, ಶ್ರೀ ಮಧುಕೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ರಾಜಶೇಖರ ಒಡೆಯರ್ ಸೇರಿದಂತೆ ಅಪಾರ ಗಣ್ಯರು ಸಂತಾಪ ಸೂಚಿಸಿದ್ದಾರೆ.