ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ನಟ ದರ್ಶನ್ ಸೇರಿದಂತೆ ಎಲ್ಲಾ ಏಳು ಆರೋಪಿಗಳ ಜಾಮೀನನ್ನು ರದ್ದುಪಡಿಸಿದೆ. ಅಲ್ಲದೇ ಎಲ್ಲಾ ಆರೋಪಿಗಳು ಕೂಡಲೇ ಶರಣಾಗುವಂತೆ ಕೋರ್ಟ್ ಸೂಚಿಸಿದೆ. ಶರಣಾಗದಿದ್ದರೆ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ.
ಸುಪ್ರೀಂಕೋರ್ಟ್ ಗುರುವಾರ ನೀಡಿರುವ ತೀರ್ಪು ಮೃತ ರೇಣುಕಾಸ್ವಾಮಿ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಮಗನ ಸಾವಿಗೆ ನ್ಯಾಯ ಸಿಗುವ ವಿಶ್ವಾಸ ಹೆಚ್ಚಾಗಿದೆ ಎಂದು ರೇಣುಕಾಸ್ವಾಮಿ ತಾಯಿ ರತ್ನ ಪ್ರಭಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್ ಆದೇಶಕ್ಕೆ ಎಲ್ಲರೂ ತಲೆ ಬಾಗಲೇಬೇಕು. ಸುಪ್ರೀಂಕೋರ್ಟ್ ಆದೇಶದಿಂದ ನ್ಯಾಯಾಂಗ ಮೇಲಿನ ವಿಶ್ವಾಸ ಹೆಚ್ಚಾಗಿದೆ ಎಂದರು. ನಮ್ಮ ಮನೆಯವರು ಪೂಜೆಗೆ ಕುಳಿತಾಗ ಸುಪ್ರೀಂಕೋರ್ಟ್ ಆದೇಶ ಬಂದಿದೆ. ಈ ತೀರ್ಪಿನಿಂದ ಸಂತೋಷವಾಗಿದೆ. ನನ್ನ ಪತಿ ಪೂಜೆಗೆ ಹೊರಟಾಗಲೇ ನ್ಯಾಯ ಸಿಗುವ ವಿಶ್ವಾಸ ಇತ್ತು ಎಂದು ಹೇಳಿದರು.
ಇನ್ನೂ ರೇಣುಕಾಸ್ವಾಮಿ ಪತ್ನಿ ಸಹನಾ ಮಾತನಾಡಿ, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಅನ್ವಯ ತಕ್ಕ ಶಿಕ್ಷೆ ಆಗಲಿ ಎಂದರು. ರೇಣುಕಾಸ್ವಾಮಿ ತಂದೆ ಕಾಶಿನಾಥ್, ಜಾಮೀನು ರದ್ದತಿಯಿಂದ ನ್ಯಾಯಾಂಗದ ಮೇಲೆ ನಂಬಿಕೆ ಬಂದಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಕಾನೂನಿನ ಬಗ್ಗೆ ನಂಬಿಕೆ, ವಿಶ್ವಾಸ ಮೂಡಿದೆ. ಅಪರಾಧಿಗಳಿಗೆ ಶಿಕ್ಷೆ ಆಗುವ ಭರವಸೆ ಇದೆ. ಸೊಸೆಯ ಕೆಲಸದ ಬಗ್ಗೆ ನೋವಿದೆ. ಕೆಲಸ ಕೊಡುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.