ಹೊಸದಿಗಂತ ಕಲಬುರಗಿ:
ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶ್ರೇಷ್ಠ ಸಂತ, ಜ್ಞಾನದಾಸೋಹಿ, ಕರ್ನಾಟಕದ ಮದನ್ ಮೋಹನ ಮಾಳವೀಯ, ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ, ಜ್ಞಾನ ರತ್ನ ಮಹಾದಾಸೋಹಿ ಶ್ರೀ ಡಾ.ಶರಣಬಸವಪ್ಪ ಅಪ್ಪ (91) ಅವರು ಗುರುವಾರ ರಾತ್ರಿ 9.20ಕ್ಕೆ ತ್ಯಜಿಸಿ ಶಿವೈಕ್ಯರಾದರು.
ನಾಡಿನ ಶರಣರ ದಾಸೋಹ ಪರಂಪರೆಯ ಜ್ಞಾನದ ಕೊಂಡಿಯೊಂದು ಕಳಚಿದಂತಾಗಿದೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾಗಿದ್ದಾರೆ. ಧರ್ಮಪತ್ನಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಮಹಾದಾಸೋಹ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ, ಗಂಗಾಂಬಿಕಾತಾಯಿ, ತೇಜಸ್ವಿನಿತಾಯಿ, ಉಮಾತಾಯಿ, ಗೋದುತಾಯಿ, ಕುಮಾರಿ ಶಿವಾನಿ, ಕುಮಾರಿ ಕೋಮಲಾದೇವಿ ಹಾಗೂ ಕುಮಾರಿ ಮಹೇಶ್ವರಿ ಎಂಬ ಪುತ್ರಿಯರು ಸೇರಿ ಅಪಾರ ಭಕ್ತ ವರ್ಗವನ್ನು ಅಗಲಿದ್ದಾರೆ.
ಜು.25ರಂದು ರಾತ್ರಿ ಉಸಿರಾಟದ ಸೋಂಕಿನ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಿರಂತರವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ದಾಸೋಹ ಮನೆಯಲ್ಲಿಯೇ ರಾತ್ರಿ 9.23 ಗಂಟೆ ಸುಮಾರಿಗೆ ಶರಣರ ಪಾದ ಸೇರಿದರು.
ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅಂತಿಮ ಇಚ್ಛೆಯಂತೆ, ಅಪ್ಪಾಜಿ ಅವರನ್ನು ಶರಣಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ಯಲಾಯಿತು. ಗರ್ಭಗುಡಿಗೆ ಪ್ರವೇಶಿಸಿ ಶ್ರೀ ಶರಣಬಸವೇಶ್ವರರ ದರ್ಶನ ಪಡೆದರು ಹಾಗೂ ಆರತಿ ನಡೆಯಿತು. ನಂತರ ವೈದ್ಯಕಿಯ ಮೇಲ್ವಿಚಾರಣೆಯ ವಾಹನದಲ್ಲಿ ಪ್ರದಕ್ಷಿಣೆ ಮಾಡಿ, ದಾಸೋಹ ಮನೆ ಪ್ರವೇಶಿಸಿದ ನಂತರ 9.23 ಗಂಟೆ ಸುಮಾರಿಗೆ ಡಾ.ಅಪ್ಪ ಲಿಂಗೈಕ್ಯರಾದರು.