ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಸತತ 12 ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ್ದು, ರಾಷ್ಟ್ರೀಯ ಭದ್ರತೆ ಮತ್ತು ರೈತರ ಹಕ್ಕುಗಳಿಗೆ ಭಾರತದ ಅಚಲ ಬದ್ಧತೆಯನ್ನು ಒತ್ತಿ ಹೇಳಿದರು. ತಮ್ಮ ಭಾಷಣದಲ್ಲಿ, ಭಾರತವು ತನ್ನ ನದಿ ನೀರಿನ ಪಾಲಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪ್ರತಿಪಾದಿಸುತ್ತದೆ ಎಂದು ಘೋಷಿಸಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, “ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ನಿರ್ಧರಿಸಿದೆ. ಸಿಂಧೂ ಜಲ ಒಪ್ಪಂದವು ಭಾರತದ ಜನರಿಗೆ ಅನ್ಯಾಯವಾಗಿದೆ. ಭಾರತದ ನದಿಗಳು ಶತ್ರು ದೇಶಕ್ಕೆ ನೀರಾವರಿ ಮಾಡುತ್ತಿದ್ದವು, ಆದರೆ ನಮ್ಮ ಸ್ವಂತ ರೈತರು ನೀರಿನಿಂದ ವಂಚಿತರಾಗಿದ್ದರು. ಈಗ, ಭಾರತದ ನೀರಿನ ಪಾಲಿನ ಮೇಲಿನ ಹಕ್ಕು ಭಾರತ ಮತ್ತು ಅದರ ರೈತರಿಗೆ ಮಾತ್ರ ಸೇರಿದೆ.” ಎಂದು ಹೇಳಿದ್ದಾರೆ.
“ಸಿಂಧೂ ಒಪ್ಪಂದ ಎಷ್ಟು ಅನ್ಯಾಯ ಮತ್ತು ಏಕಪಕ್ಷೀಯವಾಗಿದೆ ಎಂಬುದನ್ನು ನಮ್ಮ ದೇಶದ ಜನರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ. ಭಾರತದಲ್ಲಿ ಹುಟ್ಟುವ ನದಿಗಳ ನೀರು ನಮ್ಮ ಶತ್ರುಗಳ ಹೊಲಗಳಿಗೆ ನೀರುಣಿಸುತ್ತಿದೆ, ಆದರೆ ನನ್ನ ಸ್ವಂತ ದೇಶದ ರೈತರು ಮತ್ತು ಭೂಮಿ ನೀರಿಲ್ಲದೆ ಬಾಯಾರಿಕೆಯಿಂದ ಬಳಲುತ್ತಿದೆ. ಕಳೆದ ಏಳು ದಶಕಗಳಿಂದ ನನ್ನ ದೇಶದ ರೈತರಿಗೆ ಊಹಿಸಲಾಗದ ಹಾನಿಯನ್ನುಂಟುಮಾಡಿರುವ ಒಪ್ಪಂದವಿದು. ಈಗ, ನೀರಿನ ಮೇಲಿನ ಹಕ್ಕು ಭಾರತದ ರೈತರಿಗೆ ಮಾತ್ರ” ಎಂದು ಅವರು ಮತ್ತೊಮ್ಮೆ ಘೋಷಿಸಿದ್ದಾರೆ.