ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಾಲ್ಯಾಂಡ್ ರಾಜ್ಯಪಾಲ ಎಲ್.ಗಣೇಶನ್ ಅವರು ತಮ್ಮ 80 ನೇ ವಯಸ್ಸಿನಲ್ಲಿ ಇಂದು ಸಂಜೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಗಸ್ಟ್ 8ರಂದು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಬಿದ್ದು ತಲೆಗೆ ಗಂಭೀರ ಗಾಯವಾಗಿದ್ದರಿಂದ ಗಣೇಶನ್ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಅವರು ಪೂರ್ಣಾವಧಿ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದರು. ಮದುವೆಯಾಗದೆ ಸಾರ್ವಜನಿಕ ಜೀವನಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಎಲ್.ಗಣೇಶನ್ ಬಿಜೆಪಿ ಸೇರಿದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಎಲ್.ಗಣೇಶನ್ ಅವರಿಗೆ ರಾಷ್ಟ್ರೀಯ ಬಿಜೆಪಿ ತಮಿಳುನಾಡು ಬಿಜೆಪಿ ಸಂಘಟನಾ ಕಾರ್ಯದರ್ಶಿ ಮತ್ತು ರಾಜ್ಯ ಅಧ್ಯಕ್ಷ ಹುದ್ದೆಗಳನ್ನು ನೀಡಿತು.
ಗಣೇಶನ್ ಫೆಬ್ರವರಿ 20, 2023 ರಂದು ನಾಗಾಲ್ಯಾಂಡ್‌ನ 19 ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ಗಣೇಶನ್ ಅಗಸ್ಟ್ 27, 2021 ರಿಂದ ಫೆಬ್ರವರಿ 19, 2023 ರವರೆಗೆ ಮಣಿಪುರದ 17 ನೇ ರಾಜ್ಯಪಾಲರಾಗಿ ಮತ್ತು ಜುಲೈ 28, 2022 ರಿಂದ ನವೆಂಬರ್ 17, 2022 ರವರೆಗೆ ಹಶ್ಚಿಮ ಬಂಗಾಳದ ರಾಜ್ಯಪಾಲರಾಗಿ (ಹೆಚ್ಚುವರಿ ಉಸ್ತುವಾರಿ) ಸೇವೆ ಸಲ್ಲಿಸಿದ್ದರು. ಬಳಿಕ ಫೆಬ್ರವರಿ 2023 ರಲ್ಲಿ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು.