ಹೊಸದಿಗಂತ ವರದಿ, ಹೊನ್ನಾವರ:
ಪ್ರಸಿದ್ಧ ಜಾನಪದ ವಿದ್ವಾಂಸರು, ಕರ್ಕಿ ಚನ್ನಕೇಶವ ಪೌಢ ಶಾಲೆಯ ನಿವೃತ್ತ ಮುಖ್ಯೊಧ್ಯಾಪಕಿ ಹೊನ್ನಾವರದ ಶಾಂತಿ ನಾಯಕ ಶುಕ್ರವಾರ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
1943ರಲ್ಲಿ ಅಂಕೋಲಾ ಬೇಲಿಕೇರಿಯಲ್ಲಿ ಜನಿಸಿದ ಶಾಂತಿ ನಾಯಕ ಬಿ.ಎಡ್, ಎಂ.ಎ. ಅಧ್ಯಯನ ಮಾಡಿದ ಶಾಂತಿ ನಾಯಕ ಅವರು ಹಿರಿಯ ಜಾನಪದ ವಿದ್ವಾಂಸ ಡಾ.ಎನ್. ಆರ್. ನಾಯಕ ಇವರನ್ನು ವಿವಾಹವಾಗಿ ಹೊನ್ನಾವರಕ್ಕೆ ಬಂದರು. ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಆರಂಭಿಸಿ ಮುಖ್ಯಾಧ್ಯಾಪಕಿಯಾಗಿ ನಿವೃತ್ತಿ ಹೊಂದಿದ್ದಾರೆ. 1960ರಿಂದ ಈವರೆಗೆ 60 ವರ್ಷಗಳಿಂದ ತಮ್ಮ ಬಿಡುವಿನಲ್ಲಿ ಜಾನಪದ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 2001ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿ, 2003ರಿಂದ ಜಾನಪದ ಪರಿಷತ್ತಿನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. 1982ರಲ್ಲಿ ಡಾ. ಎನ್.ಆರ್.ನಾಯಕ ಜೊತೆ ಜಾನಪದ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಜನಪದ ಸಸ್ಯ, ಜನಪದ ಔಷದ ಸಸ್ಯ, ಜಾನಪದ ಆಹಾರ ಮೊದಲಾದ ವಿಷಯಗಳಲ್ಲಿ 50ಕ್ಕೂ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಗೊಟಗೋಡಿಯ ಜನಪದ ವಿಶ್ವವಿದ್ಯಾಲಯ ಸ್ಥಾಪಕ ಸದಸ್ಯರಾಗಿದ್ದ ಇವರು ಅದರ ಬೆಳವಣಿಗೆ ತುಂಬಾ ಕೊಡುಗೆಯನ್ನು ನೀಡಿದ್ದಾರೆ.
“ಜಾನಪದ ಸಾಹಿತ್ಯ” ಕಲೆಗಳ ಸಂರಕ್ಷಣೆ, ಪ್ರಸರಣೆ ಹಾಗೂ ಅಭಿವೃದ್ಧಿ, ಕೊಡುಗೆಯ ಗೌರವಾರ್ಥ ಕರ್ನಾಟಕ ಜನಪದ ವಿಶ್ವವಿದ್ಯಾಲಯ “ಡಾಕ್ಟರ್ ಆಫ್ ಲೆಟರ್ಸ್” (ಗೌರವ ಡಾಕ್ಟರೇಟ್) ಪಡೆದಿದ್ದಾರೆ. ಮನೆಯಲ್ಲಿ ಜನಪದ ಸಸ್ಯವನ್ನು ಬೆಳೆಸಿರುವ ಇವರು ಎರಡು ಮಹಿಳಾ ಸಹಕಾರಿ ಬ್ಯಾಂಕನ್ನು ಸ್ಥಾಪಿಸಿದ್ದಾರೆ. ತಾಲೂಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ ಇವರು, ಸಾಹಿತ್ಯ ಸಮ್ಮೇಳನ ಹಾಗೂ ಜನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
ಪತಿ ಡಾ. ಎನ್. ಆರ್ ನಾಯಕ ಇರ್ವರು ಪುತ್ರರು ಹಾಗೂ ಜನಪದ ತಜ್ಞೆ ಮಗಳು ಸವಿತಾ ಸೇರಿದಂತೆ ಅಪಾರ ಅಭಿಮಾನಿಗಳಿಂದ ದೂರವಾಗಿದ್ದಾರೆ. ಅವರ ಇಚ್ಚೆಯಂತೆ ಶನಿವಾರ ಮುಂಜಾನೆ 11 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಕಾರವಾರದ ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲಾಗುವುದು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಶಾಂತಿ ನಾಯಕ ಅವರನ್ನು ಕಳೆದುಕೊಂಡ ಕನ್ನಡ ಜನಪದ ಲೋಕ ಬಡವಾಗಿದೆ.