ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ, ದೀರ್ಘ ವಿರಾಮದ ನಂತರ ಮತ್ತೊಮ್ಮೆ ಭಾರತಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಡಿಸೆಂಬರ್ 12, 2025ರಿಂದ ಆರಂಭವಾಗುವ ಈ ಮೂರು ದಿನಗಳ ವಿಶೇಷ ಪ್ರವಾಸಕ್ಕೆ “ಗೋಟ್ ಟೂರ್ ಆಫ್ ಇಂಡಿಯಾ 2025” ಎಂಬ ಹೆಸರಿಡಲಾಗಿದೆ. ಇದು 2011ರ ನಂತರ ಮೆಸ್ಸಿಯ ಮೊದಲ ಭಾರತ ಭೇಟಿ ಆಗಿದ್ದು, ಅಭಿಮಾನಿಗಳು ಮತ್ತು ಕ್ರೀಡಾಪ್ರೇಮಿಗಳಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಈ ಪ್ರವಾಸದಲ್ಲಿ ಮೆಸ್ಸಿ ಕೇವಲ ಪಂದ್ಯಗಳಲ್ಲ, ಹಲವು ನಗರಗಳಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡುವ ಮೂಲಕ ಭಾರತೀಯ ಯುವಕರಿಗೆ ಸ್ಫೂರ್ತಿಯಾಗುವ ಉದ್ದೇಶ ಹೊಂದಿದ್ದಾರೆ.
ಪ್ರವಾಸದ ವೇಳಾಪಟ್ಟಿ
ಡಿಸೆಂಬರ್ 12 – ಕೋಲ್ಕತ್ತಾ: ಮೆಸ್ಸಿ ರಾತ್ರಿ ಆಗಮಿಸಿ, ಡಿಸೆಂಬರ್ 13ರಂದು ‘ಮೀಟ್ ಅಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಡನ್ ಗಾರ್ಡನ್ಸ್ ಅಥವಾ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ‘ಗೋಟ್ ಕನ್ಸರ್ಟ್’ ಮತ್ತು ‘ಗೋಟ್ ಕಪ್’ ಪಂದ್ಯದಲ್ಲಿ ಭಾಗವಹಿಸುವರು.
ಡಿಸೆಂಬರ್ 13 – ಅಹಮದಾಬಾದ್: ಸಂಜೆ ಅದಾನಿ ಫೌಂಡೇಶನ್ನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿಸೆಂಬರ್ 14 – ಮುಂಬೈ: ಮಧ್ಯಾಹ್ನ CCI ಬ್ರಬೋರ್ನ್ನಲ್ಲಿ ‘ಮೀಟ್ ಅಂಡ್ ಗ್ರೀಟ್’ ಹಾಗೂ ಸಂಜೆ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ಮತ್ತು ಸಂಗೀತ ಕಚೇರಿ. ವಿಶೇಷ ‘ಮುಂಬೈ ಪ್ಯಾಡಲ್ ಗೋಟ್ ಕಪ್’ದಲ್ಲಿ ಶಾರುಖ್ ಖಾನ್, ಲಿಯಾಂಡರ್ ಪೇಸ್ ಹಾಗೂ ಇತರ ತಾರೆಯರೊಂದಿಗೆ ಆಟ.
ಡಿಸೆಂಬರ್ 15 – ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಪಂದ್ಯ ಹಾಗೂ ಸಂಗೀತ ಕಚೇರಿ. ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಭಾಗವಹಿಸುವ ಸಾಧ್ಯತೆ. ಇದೆಲ್ಲದರ ಜೊತೆಗೆ ಸಾರ್ವಜನಿಕರಿಗೆ 3,500.ರೂ. ಆರಂಭಿಕ ಟಿಕೆಟ್ ಬೆಲೆ ನಿರ್ಧರಿಸಲಾಗಿದೆ.
ಪ್ರಸಿದ್ಧ ತಾರೆಯರ ಜೊತೆ ಆಟ – ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ರೋಹಿತ್ ಶರ್ಮಾ, ರಣವೀರ್ ಸಿಂಗ್, ಅಮೀರ್ ಖಾನ್ ಮೊದಲಾದವರು.
ಮಕ್ಕಳಿಗಾಗಿ ಮಾಸ್ಟರ್ ತರಗತಿಗಳು – ಪ್ರತಿ ನಗರದಲ್ಲಿಯೂ ಸ್ಥಳೀಯ ಬಾಲಕ-ಬಾಲಕಿಯರಿಗೆ ಫುಟ್ಬಾಲ್ ಪಾಠ.
ಮೆಸ್ಸಿಯ ಈ ಭಾರತ ಪ್ರವಾಸ ಕೇವಲ ಕ್ರೀಡಾ ಕಾರ್ಯಕ್ರಮವಲ್ಲ; ಇದು ಭಾರತೀಯ ಯುವಕರಲ್ಲಿ ಕ್ರೀಡೆಗೆ ಹೊಸ ಉತ್ಸಾಹ ತುಂಬುವ, ಫುಟ್ಬಾಲ್ ಪ್ರಚಾರಕ್ಕೆ ದಾರಿ ತೆರೆದಿಡುವ ಮಹತ್ವದ ಕ್ಷಣ. ಮೆಸ್ಸಿಯ ಹಾಜರಾತಿ ದೇಶದ ಕ್ರೀಡಾ ಸಂಸ್ಕೃತಿಗೆ ಮತ್ತೊಂದು ಚೈತನ್ಯ ತುಂಬಲಿದೆ.