ಹೊಸದಿಗಂತ ವರದಿ, ತುಮಕೂರು :
ತುಮಕೂರು ನಗರ ಬಾಣವರ ಗೇಟ್ ಬಳಿ ಮೂರು ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಗರದ ಯಾದವನಗರದ ಸುರೇಶ್ (55) , ಮುರಳಿ (52) ಮೃತರು. ಜೆಡಿಎಸ್ ವಕ್ತಾರ ಜಯಣ್ಣ ಸ್ಥಿತಿ ಗಂಭೀರವಾಗಿದೆ. ಮೃತ ಸುರೇಶ್ ಗುಬ್ಬಿ ತಾ ಪಂ ಮಾಜಿ ಸದಸ್ಯ. ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸೇರಿದಂತೆ 5 ಮಂದಿ ಗಾಯಗೊಂಡಿದ್ದಾರೆ.
ತುಮಕೂರು ತಾಲೂಕಿನ ಬಾಣಾವರ ಬಳಿ ಈ ಸರಣಿ ಅಪಘಾತ ಸಂಭವಿಸಿದೆ. ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ತೆರಳುತ್ತಿದ್ದ ಕ್ವಾಲಿಸ್ ಹಾಗೂ ಮುಂದೆ ಬರುತಿದ್ದ ಎಸ್ಟೀಮ್ ಹಾಗೂ ಬೋಲೆನೋ ಕಾರಿನ ನಡುವೆ ಸರಣಿ ಅಪಘಾತ ನಡೆದಿದೆ.
ಪೊಲೀಸ್ ಇನ್ಸ್ ಪೆಕ್ಟರ್ ರಾಮಕೃಷ್ಣ , ಜೆಡಿಎಸ್ ವಕ್ತಾರ ಜಯಣ್ಣ , ಮೃತ ಮುರಳಿ, ಸುರೇಶ್ ಆದಿಚುಂಚನಗಿರಿಯಿಂದ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ತುಮಕೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ತುಮಕೂರು ಕಡೆಯಿಂದ ಕುಣಿಗಲ್ ಗೆ ತೆರಳುತ್ತಿದ್ದ ಕಾರು ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ, ಆ ಕಾರಿನ ಹಿಂದಿದ್ದ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರಿದ್ದ ಕಾರಿಗೆ ಅಪ್ಪಳಿಸಿದೆ. ಅಪಘಾತದ ರಭಸಕ್ಕೆ ರಾಮಕೃಷ್ಣ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಆ ಕಾರು ಚಲಾಯಿಸುತ್ತಿದ್ದ ಜಯಣ್ಣ ಗಂಭೀರ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಹೆಬ್ಬೂರು ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆ ರವಾನೆ ಮಾಡಲಾಗಿದೆ.



