ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕಂಡುಬರುತ್ತಿರುವ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಹೃದಯಾಘಾತ ಒಂದು. ಹಿಂದೆ ಹೃದಯ ಸಂಬಂಧಿ ಕಾಯಿಲೆಗಳು ಕೇವಲ ಹಿರಿಯರಲ್ಲಿ ಮಾತ್ರ ಕಾಣಿಸುವುದೆಂಬ ಕಲ್ಪನೆ ಇತ್ತು. ಆದರೆ ಈಗ ಯುವಕರು, ಮೇಲ್ನೋಟಕ್ಕೆ ಆರೋಗ್ಯವಾಗಿರುವವರು ಕೂಡ ಇದ್ದಕ್ಕಿದ್ದಂತೆ ಜೀವ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಈ ಹಿನ್ನೆಲೆ ಆರೋಗ್ಯ ತಜ್ಞರು ಹೊರಹಾಕಿರುವ ಮತ್ತೊಂದು ಮಾಹಿತಿ ಇನ್ನಷ್ಟು ಕಳವಳ ಮೂಡಿಸಿದೆ.
ಅಮೆರಿಕಾದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆದ ಒಂದು ವಿಶ್ಲೇಷಣಾ ಅಧ್ಯಯನದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಗಂಡಸರು ಭಾಗಿಯಾಗಿದ್ದರು. ಈ ಅಧ್ಯಯನದಲ್ಲಿ “ಬ್ರೋಕನ್ ಹಾರ್ಟ್ ಸಿಂಡ್ರೋಮ್” ಎಂಬ ಅಪರೂಪದ ಸ್ಥಿತಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಈ ಸಿಂಡ್ರೋಮ್ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ ಎಂದು ಹಿಂದಿನ ವರದಿಗಳು ಹೇಳಿದ್ದರೂ, ಇತ್ತೀಚಿನ ಮಾಹಿತಿಯ ಪ್ರಕಾರ ಪುರುಷರೇ ಹೆಚ್ಚು ಬಲಿಯಾಗುತ್ತಿರುವುದು ದೃಢಪಟ್ಟಿದೆ. ತೀವ್ರ ಒತ್ತಡ, ಮಾನಸಿಕ ಖಿನ್ನತೆ, ವೈಫಲ್ಯ, ಆರ್ಥಿಕ ನಷ್ಟ ಅಥವಾ ಕುಟುಂಬದ ಒತ್ತಡಗಳು ಈ ಸಿಂಡ್ರೋಮ್ಗೆ ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ.
ಅಧ್ಯಯನದ ಅಂಕಿಅಂಶ ಪ್ರಕಾರ, ಮಹಿಳೆಯರಿಗಿಂತ ದ್ವಿಗುಣ ಪ್ರಮಾಣದಲ್ಲಿ ಪುರುಷರು ಈ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರಲ್ಲಿ ಈ ಸಿಂಡ್ರೋಮ್ನಿಂದ ಉಂಟಾಗುವ ಸಾವು 5.5% ಇದ್ದರೆ, ಪುರುಷರಲ್ಲಿ ಅದು 11.2% ರಷ್ಟಿದೆ. 61 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಇದರ ಅಪಾಯ ಸೀಮಿತವಾಗಿ ಕಂಡುಬಂದರೆ, 31 ರಿಂದ 45 ವರ್ಷದ ಮಧ್ಯ ವಯಸ್ಸಿನ ಪುರುಷರಲ್ಲಿ ಇದರ ಪ್ರಭಾವ ಹೆಚ್ಚಿದೆ. ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಗಂಭೀರ ಹೃದಯ ಸಂಬಂಧಿ ಕಾಯಿಲೆಗಳಿಗೂ ಈ ಸಿಂಡ್ರೋಮ್ ಕಾರಣವಾಗುತ್ತಿರುವುದು ಗಮನಾರ್ಹ.
ವಿಶೇಷವಾಗಿ 2016ರ ನಂತರ ಈ ಸಮಸ್ಯೆಯ ಪ್ರಮಾಣ ಹೆಚ್ಚುತ್ತಲೇ ಬಂದಿದ್ದು, ಕಳೆದ ಐದು ವರ್ಷಗಳಲ್ಲಿ ಪುರುಷರ ಮರಣ ಪ್ರಮಾಣದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂಬುದು ಆತಂಕಕಾರಿ ಸಂಗತಿ. ತಜ್ಞರ ಪ್ರಕಾರ, ಈ ರೋಗಕ್ಕೆ ಸೂಕ್ತ ಚಿಕಿತ್ಸೆ ವಿಧಾನಗಳು ಇನ್ನೂ ಸಮರ್ಪಕವಾಗಿ ಲಭ್ಯವಿಲ್ಲ. ಆದರೆ, ಜೀವನಶೈಲಿಯಲ್ಲಿ ಬದಲಾವಣೆ, ಒತ್ತಡ ನಿಯಂತ್ರಣ, ಮಾನಸಿಕ ಶಾಂತಿಗೆ ಆದ್ಯತೆ ನೀಡುವುದರಿಂದ ಜೀವವನ್ನು ಉಳಿಸಿಕೊಳ್ಳಲು ಸಾಧ್ಯ.
“ಬ್ರೋಕನ್ ಹಾರ್ಟ್ ಸಿಂಡ್ರೋಮ್” ಎಂಬ ಈ ಹೊಸ ಆತಂಕ ಪುರುಷರ ಜೀವಕ್ಕೆ ದೊಡ್ಡ ಸವಾಲಾಗಿದೆ. ಕೆಲಸ, ಕುಟುಂಬ, ಆರ್ಥಿಕ ಒತ್ತಡಗಳ ನಡುವೆಯೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ. ಸಮಯಕ್ಕೆ ತಕ್ಕಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು, ಒತ್ತಡವನ್ನು ನಿಯಂತ್ರಿಸುವುದು, ಹಾಗೂ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದೇ ಈ ಸಮಸ್ಯೆಗೆ ಏಕೈಕ ಪರಿಹಾರವೆಂದು ತಜ್ಞರು ಹೇಳಿದ್ದಾರೆ.