ಭಾರತವು ವಿವಿಧ ಸಂಸ್ಕೃತಿ ಮತ್ತು ಆಹಾರ ಪದ್ಧತಿಗಳಿಂದ ಕೂಡಿದ ದೇಶ. ಇಲ್ಲಿ ಜನರ ಆಹಾರದ ಅಭಿರುಚಿ ಧಾರ್ಮಿಕ ನಂಬಿಕೆ, ಸಂಪ್ರದಾಯ, ಪ್ರಾದೇಶಿಕ ಪರಿಸ್ಥಿತಿ ಹಾಗೂ ಆಹಾರ ಲಭ್ಯತೆಯ ಮೇಲೆ ಆಧಾರಿತವಾಗಿದೆ. ಕೆಲವು ರಾಜ್ಯಗಳಲ್ಲಿ ಸಸ್ಯಾಹಾರ ಜೀವನ ಶೈಲಿಯ ಭಾಗವಾಗಿ ಕಂಡುಬರುತ್ತದೆ, ಇನ್ನೂ ಕೆಲವು ಕಡೆಗಳಲ್ಲಿ ಮಾಂಸಾಹಾರ ದಿನನಿತ್ಯದ ಆಹಾರವಾಗಿರುತ್ತದೆ. ಈ ವೈವಿಧ್ಯತೆಯೇ ಭಾರತದ ಆಹಾರ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ.
ಇತ್ತೀಚೆಗೆ ಹೊರಬಂದ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಸಸ್ಯಾಹಾರಿಗಳನ್ನು ಹೋಲಿಸಿದರೆ ಮಾಂಸಾಹಾರಿಗಳ ಪ್ರಮಾಣ ಬಹಳ ಹೆಚ್ಚು ಎಂಬುದು ತಿಳಿದುಬಂದಿದೆ.
ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 85% ಕ್ಕಿಂತ ಹೆಚ್ಚು ಜನರು ಮಾಂಸಾಹಾರ ಸೇವಿಸುತ್ತಾರೆ. ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಮಾಂಸಾಹಾರ ಸೇವನೆಯು ಬಹಳ ಸಾಮಾನ್ಯ. ನಾಗಾಲ್ಯಾಂಡ್ ರಾಜ್ಯವು 99.8% ಜನಸಂಖ್ಯೆಯೊಂದಿಗೆ ಅತಿ ಹೆಚ್ಚು ಮಾಂಸಾಹಾರ ಸೇವಿಸುವ ರಾಜ್ಯವಾಗಿದೆ. ಅದರ ನಂತರ ಪಶ್ಚಿಮ ಬಂಗಾಳ 99.3% ಜನರೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಕೇರಳವು 99.1% ನೊಂದಿಗೆ ಮೂರನೇ ಸ್ಥಾನವನ್ನು ಪಡೆದಿದೆ. ಇದೇ ಕ್ರಮದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಮಣಿಪುರ, ತ್ರಿಪುರಾ, ಮೇಘಾಲಯ ಮತ್ತು ಅಸ್ಸಾಂ ರಾಜ್ಯಗಳು ಕೂಡ ಶೇ. 97 ರಿಂದ 99ರ ನಡುವೆ ಮಾಂಸಾಹಾರ ಸೇವಿಸುತ್ತಿವೆ.
ಗೋವಾ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಮಾಂಸಾಹಾರ ಸೇವನೆಯು ಬಹಳ ಹೆಚ್ಚಾಗಿದೆ. ತೆಲಂಗಾಣದಲ್ಲಿ ತಲಕಾಯಿ ಕೂರಾ, ಪಾಯಾ ಮತ್ತು ದಮ್ ಬಿರಿಯಾನಿ ಜನಪ್ರಿಯ ಮಾಂಸಾಹಾರ ಪದಾರ್ಥಗಳಾಗಿವೆ. ಮತ್ತೊಂದೆಡೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾಂಸಾಹಾರ ಸೇವನೆಯು ತೀರಾ ಕಡಿಮೆಯಿದ್ದು, ಕರ್ನಾಟಕದಲ್ಲಿ 81.2% ಜನರು ಮಾತ್ರ ಮಾಂಸಾಹಾರ ಸೇವಿಸುತ್ತಾರೆ ಎಂದು ವರದಿ ಹೇಳುತ್ತದೆ.
ಭಾರತದಲ್ಲಿ ಮಾಂಸ ಸೇವನೆಯು ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ವಾರಕ್ಕೊಮ್ಮೆ ಮಾಂಸಾಹಾರ ಸೇವಿಸುತ್ತಾರೆ ಎನ್ನಲಾಗಿದೆ.
ಆದರೆ ಎಲ್ಲ ರಾಜ್ಯಗಳಲ್ಲಿಯೂ ಮಾಂಸ ಸೇವನೆಗೆ ಸ್ವಾತಂತ್ರ್ಯವಿಲ್ಲ. ಪಶ್ಚಿಮ ಬಂಗಾಳ ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಯಾವುದೇ ನಿರ್ಬಂಧವಿಲ್ಲದಿದ್ದರೆ, ಇತರ ರಾಜ್ಯಗಳಲ್ಲಿ ಮಾರಾಟ ಹಾಗೂ ಸೇವನೆಗೆ ನಿಯಂತ್ರಣಗಳನ್ನು ಹೇರಲಾಗಿದೆ.
ಒಟ್ಟಿನಲ್ಲಿ, ಭಾರತದಲ್ಲಿ ಮಾಂಸಾಹಾರ ಸೇವನೆಯು ಸಸ್ಯಾಹಾರವನ್ನು ಮೀರಿಸಿದ್ದು, ಆಹಾರ ಪದ್ಧತಿಯಲ್ಲಿನ ವೈವಿಧ್ಯತೆ ದೇಶದ ಸಾಂಸ್ಕೃತಿಕ ಸಂಪತ್ತನ್ನು ತೋರಿಸುತ್ತದೆ. ಆದರೂ, ಕೆಲವು ರಾಜ್ಯಗಳಲ್ಲಿ ಸಸ್ಯಾಹಾರಿಗಳ ಸಂಖ್ಯೆಯು ಇನ್ನೂ ಗಮನಾರ್ಹವಾಗಿದ್ದು, ಭಾರತವು ಸಸ್ಯಾಹಾರಿಗಳ ಅತಿ ದೊಡ್ಡ ರಾಷ್ಟ್ರ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ.