ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದ ಸೂರಜ್‌ಕುಂಡ್ ಅಂತಾರಾಷ್ಟ್ರೀಯ ಕರಕುಶಲ ಮೇಳದಲ್ಲಿ ಸಂಭವಿಸಿದ ಸ್ವಿಂಗ್ ದುರಂತ ಸಂಬಂಧ ಸ್ವಿಂಗ್ ಮಾಲೀಕ ಮತ್ತು ಆಪರೇಟರ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆಯಲ್ಲಿ ರಕ್ಷಣೆಗೆ ತೆರಳಿದ್ದ ಇನ್ಸ್ ಪೆಕ್ಟರ್ ದುರಂತ ಸಾವನ್ನಪ್ಪಿದ್ದರು. ಇವರೊಟ್ಟಿಗೆ ಇತರೆ ಹನ್ನೆರಡು ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ದುರಂತದ ಸಂದರ್ಭ ಸುಮಾರು 19 ಜನರು ತೂಗುಯ್ಯಾಲೆಯ ಮೇಲೆ ಇದ್ದರು, ಅದು ಸಂಜೆ ಸುಮಾರು 6 ಗಂಟೆಗೆ ಒಂದು ಬದಿಯಿಂದ ಓರೆಯಾಗಿ ಜಾರಿತು. ಈ ವೇಳೆ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಮತ್ತು ಇತರ ಪೊಲೀಸ್ ಸಿಬ್ಬಂದಿ ಸಿಕ್ಕಿಬಿದ್ದವರನ್ನು ರಕ್ಷಿಸಲು ಧಾವಿಸಿದರು. ರಕ್ಷಣಾ ಕಾರ್ಯ ನಡೆಯುತ್ತಿರುವಾಗ, ಇನ್ನೊಂದು ಬದಿಯಿಂದ ತೂಗುಯ್ಯಾಲೆ ಬಿದ್ದು ರಕ್ಷಣಾ ಸಿಬ್ಬಂದಿಯ ಮೇಲೆ ಕುಸಿದು ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಸಹಾಯಕ ಸಬ್-ಇನ್‌ಸ್ಪೆಕ್ಟರ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಸ್ವಿಂಗ್ ಆಪರೇಟರ್ ಮತ್ತು ಅವರ ಸಿಬ್ಬಂದಿಯ ಸಂಪೂರ್ಣ ನಿರ್ಲಕ್ಷ್ಯ ಮತ್ತು ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಕಾರಣ ಈ ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಬ್ಬರು ಆರೋಪಿಗಳನ್ನು ಹರಿಯಾಣಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಮೇಳದಲ್ಲಿ ರೈಡ್ ಅಳವಡಿಸಿದ ಹಿಮಾಚಲ ಫನ್ ಕೇರ್ ಕಂಪನಿಯ ಮಾಲೀಕ ಮೊಹಮ್ಮದ್ ಶಕೀರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ದುರಂತದ ತನಿಖೆಗೆ ಡಿಸಿಪಿ (ಅಪರಾಧ) ಮುಖೇಶ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಸುರಕ್ಷತಾ ಅನುಸರಣೆ, ಜವಾಬ್ದಾರಿ ಮತ್ತು ಸಂಭವನೀಯ ನಿರ್ಲಕ್ಷ್ಯ ಸೇರಿದಂತೆ ಘಟನೆಯ ಎಲ್ಲಾ ಅಂಶಗಳನ್ನು ಎಸ್‌ಐಟಿ ಪರಿಶೀಲಿಸುತ್ತದೆ. ಇದರ ಜೊತೆಗೆ, ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಪ್ರತ್ಯೇಕ ಆಡಳಿತಾತ್ಮಕ ತನಿಖೆ ನಡೆಸಲಿದೆ.



