August 30, 2026
Sunday, August 30, 2026
spot_img

ಮಳೆ ಅವಾಂತರ | ನೂರಾರು ಪಿಸಿ ಪರೀಕ್ಷಾರ್ಥಿಗಳ ಭವಿಷ್ಯಕ್ಕೆ ಕಂಟಕವಾದ ಸಕಲೇಶಪುರ ಗುಡ್ಡ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರೈಲ್ವೆ ಹಳಿಯ ಮೇಲೆ ಭಾರಿ ಪ್ರಮಾಣದ ಮಣ್ಣು ಮತ್ತು ಗುಡ್ಡ ಕುಸಿದು ಬಿದ್ದಿದೆ. ಇದರ ಪರಿಣಾಮವಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಬರೆಯಲು ಹೊರಟಿದ್ದ ನೂರಾರು ಪರೀಕ್ಷಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.‌

ಪರೀಕ್ಷಾರ್ಥಿಗಳ ಕಣ್ಣೀರು, ಪರದಾಟ:

ಇಂದು ನಡೆಯಲಿರುವ ಪೊಲೀಸ್ ಕಾನ್ಸ್‌ಟೇಬಲ್ (PC) ನೇಮಕಾತಿ ಪರೀಕ್ಷೆಗಾಗಿ ಮಂಗಳೂರು, ಉಡುಪಿ ಕಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಅಭ್ಯರ್ಥಿಗಳು ಅರ್ಧ ದಾರಿಯಲ್ಲೇ ಸಿಲುಕಿಕೊಂಡಿದ್ದಾರೆ. ರೈಲುಗಳು ಅರ್ಧಕ್ಕೆ ನಿಂತಿದ್ದರಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗದೆ ಅಭ್ಯರ್ಥಿಗಳು ಕಣ್ಣೀರು ಹಾಕುತ್ತಿದ್ದಾರೆ. ಘಾಟಿ ಪ್ರದೇಶದಲ್ಲಿ ಬಸ್ ಅಥವಾ ಇತರೆ ವಾಹನಗಳ ಸೌಲಭ್ಯವೂ ತಕ್ಷಣಕ್ಕೆ ಸಿಗದೆ ಪರೀಕ್ಷಾರ್ಥಿಗಳು ದಿಕ್ಕುತೋಚದಂತಾಗಿದ್ದಾರೆ.

ಇದನ್ನೂ ಓದಿ:

ರಕ್ಷಣಾ ಕಾರ್ಯಾಚರಣೆ ಚುರುಕು:

ವಿಷಯ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಹಾಗೂ ಜೆಸಿಬಿ ಯಂತ್ರಗಳು ಸ್ಥಳಕ್ಕೆ ಧಾವಿಸಿದ್ದು, ಹಳಿಯ ಮೇಲಿನ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ಆರಂಭಿಸಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗುತ್ತಿದ್ದು, ಹಳಿ ಸಮಸ್ಥಿತಿಗೆ ಬರಲು ಇನ್ನು ಹಲವು ಗಂಟೆಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !