Postpartum Hair Loss | ಹೆರಿಗೆಯ ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದ್ಯಾ? ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿ!

ಮಗು ಜನಿಸಿದ ನಂತರ ಮಹಿಳೆಯ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ತುಂಬಾ ಸಾಮಾನ್ಯ. ತಾಯಿ ಆಗುವ ಹೊಣೆಗಾರಿಕೆ, ನಿದ್ರಾಹೀನತೆ, ದೇಹದಲ್ಲಿ ಶಕ್ತಿ ಕುಂದುವುದು ಇತ್ಯಾದಿ ಬದಲಾವಣೆಗಳ ನಡುವೆ ಅನೇಕರಿಗೆ ಹೆಚ್ಚಾಗಿ ತೊಂದರೆ ನೀಡುವ ಒಂದು ಸಮಸ್ಯೆ ಎಂದರೆ ಕೂದಲು ಉದುರುವಿಕೆ. ಹೆರಿಗೆಯ ನಂತರ ಬಹುತೇಕ ಮಹಿಳೆಯರು ಇದ್ದಕ್ಕಿದ್ದಂತೆ ಹೆಚ್ಚು ಕೂದಲು ಉದುರುತ್ತಿರುವುದನ್ನು ಗಮನಿಸುತ್ತಾರೆ. ಈ ಸ್ಥಿತಿಯಿಂದ ಅನೇಕರಿಗೆ ಆತಂಕ ಉಂಟಾಗುತ್ತದೆ, ತಮ್ಮ ತಲೆ ಬೋಳಾಗುತ್ತದೆಯೋ ಎಂಬ ಭಯವೂ ಮೂಡುತ್ತದೆ. ಆದರೆ ತಜ್ಞರ ಪ್ರಕಾರ, ಈ ಸಮಸ್ಯೆ ತಾತ್ಕಾಲಿಕವಾಗಿದ್ದು, ಸರಿಯಾದ ಆಹಾರ ಮತ್ತು ಆರೈಕೆಯಿಂದ ಸುಧಾರಿಸಬಹುದಾಗಿದೆ.

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಿರುತ್ತದೆ. ಈ ಹಾರ್ಮೋನ್ ಕೂದಲಿನ ಬೆಳವಣಿಗೆಯನ್ನು ಉತ್ತಮ ಪಡಿಸುತ್ತದೆ. ಆದರೆ ಮಗುವಿನ ಜನನದ ನಂತರ ಈಸ್ಟ್ರೊಜೆನ್ ಮಟ್ಟ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆಯ ಚಕ್ರ ಅಸ್ಥಿರವಾಗಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಆರು ತಿಂಗಳುಗಳಿಂದ ಒಂದು ವರ್ಷದೊಳಗೆ ದೇಹದ ಹಾರ್ಮೋನ್ ಮಟ್ಟ ಪುನಃ ಸಮತೋಲನಕ್ಕೆ ಬಂದು, ಕೂದಲಿನ ಬೆಳವಣಿಗೆಯು ಸಹಜ ಸ್ಥಿತಿಗೆ ಮರಳುತ್ತದೆ.

ಆದರೆ, ಈ ಅವಧಿಯಲ್ಲಿ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಹೆಚ್ಚು ಮಂದಿ ಬಯೋಟಿನ್ ಮಾತ್ರ ಸೇವಿಸಿದರೆ ಕೂದಲು ಉದುರುವಿಕೆ ನಿಲ್ಲುತ್ತದೆ ಎಂದು ಭಾವಿಸುತ್ತಾರೆ. ಆದರೆ ಕೂದಲಿನ ಆರೋಗ್ಯಕ್ಕಾಗಿ ಪ್ರೋಟೀನ್, ಕಬ್ಬಿಣ, ವಿಟಮಿನ್ ಡಿ, ಸತು ಮತ್ತು ಇನ್ನಿತರ ಪೌಷ್ಠಿಕಾಂಶಗಳು ಅಗತ್ಯ. ಹೆರಿಗೆಯ ನಂತರ ರಕ್ತಸ್ರಾವದಿಂದ ಕಬ್ಬಿಣದ ಕೊರತೆ ಉಂಟಾಗುವುದು ಸಹ ಸಾಮಾನ್ಯ. ಇದರಿಂದ ಕೂದಲು ಇನ್ನಷ್ಟು ಉದುರಬಹುದು. ಅದಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮುಖ್ಯ.

ಪ್ರೋಟೀನ್ ಕೂದಲಿನ ಬಲವನ್ನು ಹೆಚ್ಚಿಸುತ್ತದೆ.
ಕಬ್ಬಿಣ ರಕ್ತದಲ್ಲಿ ಆಮ್ಲಜನಕ ಸಾಗಿಸಲು ಸಹಾಯ ಮಾಡುತ್ತದೆ.
ಸತು ಅಂಗಾಂಶಗಳನ್ನು ದುರಸ್ತಿ ಮಾಡುತ್ತದೆ.
ವಿಟಮಿನ್ ಡಿ ಹೊಸ ಕೂದಲು ಕಿರುಚೀಲಗಳನ್ನು ರಚಿಸಲು ನೆರವಾಗುತ್ತದೆ. ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ವಿಟಮಿನ್ ಡಿ ಕೊರತೆಯನ್ನು ತಡೆಹಿಡಿಯಬಹುದು.

ಒಟ್ಟಿನಲ್ಲಿ, ಹೆರಿಗೆಯ ನಂತರ ಕೂದಲು ಉದುರುವಿಕೆ ತುಂಬಾ ಸಾಮಾನ್ಯವಾದ ಸಮಸ್ಯೆಯಾಗಿದ್ದರೂ ಅದು ಶಾಶ್ವತವಲ್ಲ. ಸಮತೋಲನ ಆಹಾರ, ಸರಿಯಾದ ಆರೈಕೆ ಮತ್ತು ಸ್ವಲ್ಪ ಸಹನೆಯಿಂದ ಈ ಸಮಸ್ಯೆಯಿಂದ ಹೊರಬಂದು ಮತ್ತೆ ಆರೋಗ್ಯಕರ ಕೂದಲನ್ನು ಪಡೆಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!