ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳ್ತಂಗಡಿಯ ಎಸ್ ಐ ಟಿ ಠಾಣೆಯಲ್ಲಿ ಅನಾಮಿಕ ದೂರುದಾರನ ವಿಚಾರಣೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ 20 ದಿನಗಳಿಂದ ತನಿಖೆ, ಶೋಧಕಾರ್ಯ ನಡೆಸುತ್ತಿರುವ ಎಸ್ ಐಟಿ ತಂಡ 17 ಸ್ಥಳಗಳಲ್ಲಿ ಗುಂಡಿ ತೋಡಿದರು ಆರನೇ ಸ್ಥಳದಲ್ಲಿ ಹಾಗೂ ಬಂಗ್ಲೆಗುಡ್ಡೆ ಅರಣ್ಯ ಪರಿಸರದಲ್ಲಿ ಕಾರ್ಯಾಚರಣೆಗೆ ತೆರಳುವ ವೇಳೆ ಭೂಮಿಯ ಮೇಲ್ಭಾಗದಲ್ಲಿ ಕಳೇಬರದ ಅವಶೇಷಗಳು ಸಿಕ್ಕಿದ್ದು ಬಿಟ್ಟರೆ ಉಳಿದ ಕಡೆಗಳಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
17 ಕಡೆ ಶೋಧ ಕಾರ್ಯದಲ್ಲಿ ಸಹಕರಿಸಿದ ಕಾರ್ಮಿಕರನ್ನು ಕೂಡ ಠಾಣೆಗೆ ಕರೆಸಲಾಗಿತ್ತು ಎಂದು ಹೇಳಲಾಗಿದೆ ದೂರುದಾರನನ್ನು ಸುಮಾರು ನಾಲ್ಕು ತಾಸಿಗೂ ಅಧಿಕ ಕಾಲ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.
ಅನಾಮಿಕ ದೂರುದಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ತಲೆಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು ಕೆಲವೊಂದು ವಿಚಾರಗಳಿಗೆ ದೂರುದಾರ ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವುದಾಗಿ ಹೇಳಲಾಗುತ್ತಿದೆ. ಶೋಧ ಕಾರ್ಯ ನಡೆದ
ಬೊಳಿಯಾರಿನ ಸ್ಥಳ ಸಂಖ್ಯೆ 15ಕ್ಕೆ ಸಂಬಂಧಪಟ್ಟಂತೆ ಇತರ ಕೆಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳ ಗ್ರಾಮದಲ್ಲಿ 1994ರಿಂದ 2014ರ ವರೆಗೆ ನಡೆದಿದೆ ಎನ್ನಲಾದ ಘಟನೆಗಳ ಮಾಹಿತಿಯನ್ನು ಎಸ್ ಐಟಿ ಈಗಾಗಲೇ ಸಂಗ್ರಹಿಸಿದೆ.