ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿರಂಗದಲ್ಲಿ ಅಚ್ಚರಿಯ ಅಲೆ ಎಬ್ಬಿಸಿರುವ ‘ಸು ಫ್ರಮ್ ಸೋ’ (Su From So) ಸಿನಿಮಾ ನಿರೀಕ್ಷೆಗಿಂತಲೂ ಹೆಚ್ಚು ಯಶಸ್ಸು ಕಂಡಿದೆ. ಹಾರರ್ ಕಾಮಿಡಿ ಕಥಾಹಂದರದಲ್ಲಿ ಬಂದಿದ್ದರೂ, ಬಿಡುಗಡೆಯ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆದಿದೆ. ಬಿಡುಗಡೆಯ ಮೊದಲು ಹೆಚ್ಚು ಚರ್ಚೆಗೆ ಗ್ರಾಸವಾಗದಿದ್ದರೂ, ಈಗ ಎಲ್ಲರ ಬಾಯಲ್ಲೂ ಇದೇ ಚಿತ್ರದ ಮಾತು ಕೇಳಿಬರುತ್ತಿದೆ.
ಜೆ.ಪಿ. ತುಮಿನಾಡು ನಿರ್ದೇಶನ ಮಾಡಿರುವ ಈ ಸಿನಿಮಾ, ಅವರ ಚೊಚ್ಚಲ ಪ್ರಯತ್ನವಾಗಿದ್ದರೂ ವಿಶ್ವದಾದ್ಯಂತ ಶೇ.100 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹಿಸಿದೆ. ನಿರ್ದೇಶಕರಾಗಿ ಮಾತ್ರವಲ್ಲದೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ತುಮಿನಾಡು ಅವರಿಗೆ ಇದು ಡಬಲ್ ಯಶಸ್ಸಾಗಿದೆ. ಅವರೊಂದಿಗೆ ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್ ಹಾಗೂ ಮೈಮ್ ರಾಮದಾಸ್ ಸೇರಿದಂತೆ ಅನೇಕರು ಅಭಿನಯಿಸಿದ್ದು, ಎಲ್ಲರ ಪಾತ್ರಗಳಿಗೆ ಪ್ರೇಕ್ಷಕರಿಂದ ಪ್ರಶಂಸೆ ಸಿಕ್ಕಿದೆ.
ಬಿಡುಗಡೆ ಆಗಿ 24 ದಿನಗಳಾದರೂ ಚಿತ್ರದ ಕಲೆಕ್ಷನ್ ಹಿನ್ನಡೆಯಾಗಿಲ್ಲ. 23 ದಿನಗಳಲ್ಲಿ ಕರ್ನಾಟಕದಲ್ಲೇ 69.2 ಕೋಟಿ ರೂಪಾಯಿ ಸಂಗ್ರಹಿಸಿರುವ ಈ ಚಿತ್ರ, ಮಲಯಾಳಂ ಆವೃತ್ತಿಯಲ್ಲಿ 5.07 ಕೋಟಿ ಹಾಗೂ ತೆಲುಗಿನಲ್ಲಿ 1.23 ಕೋಟಿ ರೂಪಾಯಿ ಗಳಿಸಿದೆ. ವಿದೇಶದ ಗಳಿಕೆ ಸೇರಿಸಿ ಒಟ್ಟು 100.99 ಕೋಟಿ ರೂಪಾಯಿಯನ್ನು ಮುಟ್ಟಿದೆ.
ಇತ್ತೀಚಿಗೆ ಬಿಡುಗಡೆಯಾದ ‘ಕೂಲಿ’ ಮತ್ತು ‘ವಾರ್ 2’ ಸಿನಿಮಾಗಳು ಸಾಕಷ್ಟು ಪರದೆಗಳನ್ನು ಪಡೆದುಕೊಂಡಿದ್ದರೂ, ‘ಸು ಫ್ರಮ್ ಸೋ’ ಹವಾ ಕಡಿಮೆಯಾಗದೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ಪ್ರತಿಯೊಂದು ವೀಕೆಂಡ್‌ನಲ್ಲೂ ಚಿತ್ರದ ಕಲೆಕ್ಷನ್ ಏರಿಕೆಯಾಗುತ್ತಿದೆ.
ಕನ್ನಡದ ಪ್ರೇಕ್ಷಕರಿಗೆ ವಿಭಿನ್ನ ಕಥಾಹಂದರವನ್ನು ಹೊಂದಿರುವ ‘ಸು ಫ್ರಮ್ ಸೋ’ ಸಿನಿಮಾ, ಪ್ರೇಕ್ಷಕರ ಹೃದಯ ಗೆದ್ದಿರುವುದಷ್ಟೇ ಅಲ್ಲದೆ, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಯಶಸ್ಸು ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ.