ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತೊಮ್ಮೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಬಾರಿ ಅವರ ಜೈಲು ವಾಸ ಸುದೀರ್ಘವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜಾಮೀನು ರದ್ದಾದ ಹಿನ್ನೆಲೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವಾರು ಆರೋಪಿಗಳು ಮತ್ತೆ ಜೈಲಿನ ಗೇಟ್ ದಾಟಿದ್ದಾರೆ.
ಜೈಲು ಸೇರಿದ ಕೆಲವೇ ದಿನಗಳಲ್ಲಿ ದರ್ಶನ್ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದು, ಅದನ್ನು ಪತ್ನಿ ವಿಜಯಲಕ್ಷ್ಮಿ ದರ್ಶನ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ಸಂದೇಶದಲ್ಲಿ ದರ್ಶನ್ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, “ನನ್ನ ಸುಖದಲ್ಲಿ ಭಾಗಿಯಾಗಿ, ಕಷ್ಟದಲ್ಲಿ ಬೆನ್ನೆಲುಬಾಗಿ ನಿಂತಿರುವುದಕ್ಕೆ ನಾನು ಜೀವನಪರ್ಯಂತ ಆಭಾರಿ” ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು, ತಮ್ಮ ಮುಂದಿನ ಸಿನಿಮಾ ದಿ ಡೆವಿಲ್ ಕುರಿತು ಸ್ಪಷ್ಟನೆ ನೀಡುತ್ತಾ, “ನಾನು ಎಲ್ಲಿದ್ದರೂ, ಸಿನಿಮಾ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಬೇಕು. ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ಮೇಲೆ ನಂಬಿಕೆ ಇಟ್ಟು ಹಣ ಹೂಡಿದ್ದಾರೆ. ಅವರ ಬೆಂಬಲಕ್ಕೆ ನಾನು ಸಂಪೂರ್ಣ ಸಹಕರಿಸುತ್ತೇನೆ” ಎಂದು ಹೇಳಿದ್ದಾರೆ. ಜೊತೆಗೆ, ಸಿನೆಮಾವನ್ನು ಕೇವಲ ಮನರಂಜನೆಯ ದೃಷ್ಟಿಯಿಂದಲೇ ನೋಡಬೇಕು ಎಂಬ ಮನವಿಯನ್ನೂ ಅಭಿಮಾನಿಗಳಿಗೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ದಿ ಡೆವಿಲ್ ಸಿನಿಮಾ ನಿಗದಿತ ವೇಳಾಪಟ್ಟಿಯಂತೆ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ದರ್ಶನ್ ಜೈಲಿನಲ್ಲಿದ್ದರೂ, ಚಿತ್ರ ತಂಡ ಹಾಗೂ ನಿರ್ಮಾಪಕರು ಬಿಡುಗಡೆಯಲ್ಲಿ ಯಾವುದೇ ತಡೆ ಬಾರದಂತೆ ನೋಡಿಕೊಳ್ಳಲಿದ್ದಾರೆ.
ಹಿಂದೆ ‘ಸಾರಥಿ’ ಸಿನಿಮಾ ಸಹ ದರ್ಶನ್ ಬಂಧನದ ಸಮಯದಲ್ಲೇ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿತ್ತು. ಈಗ ಮತ್ತೆ ಇಂತಹ ಪರಿಸ್ಥಿತಿಯಲ್ಲೇ ದಿ ಡೆವಿಲ್ ಸಿನಿಮಾ ಬಿಡುಗಡೆಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
View this post on Instagram