ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮತದಾನ ಹಕ್ಕು ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೃಹತ್ ಹೋರಾಟ ಆರಂಭಿಸಿದ್ದಾರೆ. ‘ಮತದಾರರ ಅಧಿಕಾರ ಯಾತ್ರೆ’ ಹೆಸರಿನ ಈ ಅಭಿಯಾನವು ಸಸಾರಾಮ್‌ನಿಂದ ಚಾಲನೆ ಪಡೆದಿದ್ದು, ಇಂಡಿ ಒಕ್ಕೂಟದ ಪ್ರಮುಖ ನಾಯಕರು ಸಹ ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ನೀಡಿದ ಮಾಹಿತಿಯ ಪ್ರಕಾರ, ಈ ಯಾತ್ರೆ ಒಟ್ಟು 16 ದಿನಗಳ ಕಾಲ ನಡೆಯಲಿದೆ. ಸುಮಾರು 1300 ಕಿ.ಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಲಾಗುವುದು. ಬಿಹಾರದ 20 ಜಿಲ್ಲೆಗಳ ಮೂಲಕ ಹಾದು ಹೋಗುವ ಈ ಯಾತ್ರೆಯು ಭಾನುವಾರ ಬೆಳಗ್ಗೆ 11.30ಕ್ಕೆ ಸಸಾರಾಮ್‌ನ ಸುವಾರಾ ವಿಮಾನ ನಿಲ್ದಾಣದಲ್ಲಿ ಸಭೆಯೊಂದಿಗೆ ಪ್ರಾರಂಭಗೊಂಡಿತು.
ಯಾತ್ರೆಯು ಮೊದಲ ದಿನ ಔರಂಗಾಬಾದ್ ತಲುಪಿದ್ದು, ಮುಂದಿನ ದಿನಗಳಲ್ಲಿ ರೋಹ್ತಾಸ್, ದೇವ್ ರಸ್ತೆ, ಮುಂಗೇರ್, ಕತಿಹಾರ್, ಸುಪಾಲ್, ದರ್ಭಾಂಗ, ಸೀತಾಮರ್ಹಿ, ಛಾಪ್ರಾ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲಿದೆ. ಸೆಪ್ಟೆಂಬರ್ 1ರಂದು ಪಾಟ್ನಾದಲ್ಲಿ ಬೃಹತ್ ರ್ಯಾಲಿಯೊಂದಿಗೆ ಈ ಯಾತ್ರೆಗೆ ಮುಕ್ತಾಯ ಸಿಗಲಿದೆ. ಮಧ್ಯಂತರವಾಗಿ ಆಗಸ್ಟ್ 20, 25 ಮತ್ತು 31ರಂದು ವಿರಾಮವಿರಲಿದೆ.
ಒಬ್ಬ ವ್ಯಕ್ತಿ–ಒಂದು ಮತ ಎಂಬ ಹಕ್ಕಿಗಾಗಿ ಈ ಯಾತ್ರೆ ನಡೆಸಲಾಗುತ್ತಿದೆ. ಇದು ಕೇವಲ ರಾಜಕೀಯ ಕಾರ್ಯಕ್ರಮವಲ್ಲ, ಜನರ ಚಳುವಳಿ. ಬಡವರು, ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗ ಹಾಗೂ ಅಲ್ಪಸಂಖ್ಯಾತರ ಧ್ವನಿಯನ್ನು ಅಳಿಸುವ ಪ್ರಯತ್ನಗಳ ವಿರುದ್ಧದ ಹೋರಾಟ ಇದಾಗಿದೆ ಎಂದು ಪವನ್ ಖೇರಾ ಸ್ಪಷ್ಟಪಡಿಸಿದರು.