ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಬಳಲುತ್ತಿದ್ದ ವಾಹನ ಸವಾರರಿಗೆ ಸ್ವಲ್ಪ ಮಟ್ಟಿನ ನಿರಾಳತೆ ನೀಡುವ ಸುದ್ದಿಯೊಂದು ಸಿಕ್ಕಿದೆ. ಹೆಬ್ಬಾಳ ವಿಸ್ತರಿತ ಫ್ಲೈಓವರ್ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ಸರ್ಕಾರವು ವಿಶೇಷ ಆದ್ಯತೆ ನೀಡಿ, ಕೆಲಸಗಳನ್ನು ವೇಗವಾಗಿ ಮುಗಿಸಿರುವುದು ಗಮನಾರ್ಹ.
ನಗರದ ಅತ್ಯಂತ ಸಂಚಾರಭರಿತ ವಲಯವೆಂದೇ ಪ್ರಸಿದ್ಧಿ ಪಡೆದ ಹೆಬ್ಬಾಳ ಸರ್ಕಲ್ ಸುತ್ತಮುತ್ತ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ವಾಹನ ದಟ್ಟಣೆ ಮತ್ತು ದೀರ್ಘಕಾಲದ ಜಾಮ್ ಸಮಸ್ಯೆಯಿಂದಾಗಿ ನಾಗರಿಕರು ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ಸುಮಾರು 80 ಕೋಟಿ ವೆಚ್ಚದಲ್ಲಿ 700 ಮೀಟರ್ ಉದ್ದದ ಫ್ಲೈಓವರ್ ನಿರ್ಮಾಣ ಕಾರ್ಯ ಕೈಗೊಂಡಿತು. ಕೆ.ಆರ್.ಪುರಂ ನಿಂದ ಮೇಖ್ರೀ ಸರ್ಕಲ್ ವರೆಗೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಯಿತು. 2023ರಲ್ಲಿ ಕಾಮಗಾರಿ ಆರಂಭಗೊಂಡು, ಒಂದೂವರೆ ವರ್ಷದೊಳಗೆ ಪೂರ್ಣಗೊಂಡಿದೆ.
ಉದ್ಘಾಟನೆಗೆ ಮುನ್ನ ಫ್ಲೈಓವರ್‌ನ್ನು ಹೂವಿನ ಅಲಂಕಾರದಿಂದ ಸಿಂಗಾರಿಸಲಾಗುತ್ತಿದ್ದು, ಅಧಿಕಾರಿಗಳು, ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಈ ಹೊಸ ಫ್ಲೈಓವರ್ ಆರಂಭದಿಂದ ಹೆಬ್ಬಾಳ ಭಾಗದಲ್ಲಿ ವಾಹನ ಸಂಚಾರದ ಭಾರವು ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ವಿಶೇಷವಾಗಿ ಬೆಳಗ್ಗೆ ಹಾಗೂ ಸಂಜೆ ಪೀಕ್ ಅವರ್ಸ್‌ಗಳಲ್ಲಿ ನಾಗರಿಕರು ಸುಗಮ ಸಂಚಾರವನ್ನು ಅನುಭವಿಸುವ ಸಾಧ್ಯತೆ ಇದೆ.