ಪ್ರಮುಖ ಯೂಟ್ಯೂಬರ್ ಹಾಗೂ ಬಿಗ್ ಬಾಸ್ ವಿಜೇತರಾದ ನಟ ಎಲ್ವಿಶ್ ಯಾದವ್ ಅವರ ನಿವಾಸದ ಬಳಿ ಭೀಕರ ಘಟನೆ ನಡೆದಿದೆ. ಗುರುಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಬೆಳಗ್ಗೆ ಸುಮಾರು 5:30 ರಿಂದ 6 ಗಂಟೆಯ ನಡುವೆಯೇ ಅಪರಿಚಿತ ಬೈಕ್ ಸವಾರರು ಅವರ ಮನೆಗೆ ತಲುಪಿದ್ದು, ಆಕಸ್ಮಿಕವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಎರಡು ಡಜನ್‌ಗಿಂತಲೂ ಹೆಚ್ಚು ಸುತ್ತು ಗುಂಡು ಹಾರಿಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಆ ಸಮಯದಲ್ಲಿ ಎಲ್ವಿಶ್ ಮನೆಯಲ್ಲಿ ಇರಲಿಲ್ಲ. ಇದರಿಂದ ಯಾವುದೇ ಜೀವಹಾನಿ ಸಂಭವಿಸದೇ ದೊಡ್ಡ ಅನಾಹುತ ತಪ್ಪಿದೆ.
ಘಟನೆಯ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಗುರುಗ್ರಾಮ ಪೊಲೀಸರು, ಮೊದಲು ಮನೆಯವರ ಸುರಕ್ಷತೆಯನ್ನು ಖಚಿತಪಡಿಸಿಕೊಂಡರು. ನಂತರ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ 20 ರಿಂದ 25 ಸುತ್ತು ಗುಂಡು ಹಾರಿಕೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ದಾಳಿಕೋರರನ್ನು ಪತ್ತೆಹಚ್ಚುವ ಕಾರ್ಯಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಎಲ್ವಿಶ್ ಯಾದವ್ ತಮ್ಮ ಯೂಟ್ಯೂಬ್ ಚಾನೆಲ್ ಹಾಗೂ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೂಲಕ ಜನಪ್ರಿಯರಾಗಿದ್ದು, ಅನೇಕ ಯುವಕರ ಮೆಚ್ಚುಗೆ ಪಡೆದಿದ್ದಾರೆ. ಅವರ ಮನೆ ಬಳಿ ನಡೆದ ಗುಂಡಿನ ದಾಳಿಯ ಘಟನೆ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ.