ಮಂಡ್ಯದಲ್ಲಿ ಜ್ಯುವೆಲರಿ ಶಾಪ್ ದರೋಡೆ: ಕಳ್ಳತನ ನೋಡಿದ ವ್ಯಕ್ತಿಯನ್ನು ಹತ್ಯೆಗೈದ ದುಷ್ಕರ್ಮಿಗಳು

ಹೊಸದಿಗಂತ ವರದಿ ಮಂಡ್ಯ:

ಜ್ಯುವೆಲರ್ಸ್ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದಿದ್ದ ದರೋಡೆಕೋರರು ಚಿನ್ನಾಭರಣ ದೋಚಿ ಬಳಿಕ ವ್ಯಕ್ತಿಯೊರ್ವನನ್ನು ಕೊಲೆ ಮಾಡಿರುವ ಘಟನೆ ಸಕ್ಕರೆನಾಡು ಮಂಡ್ಯದಲ್ಲಿ ನಡೆದಿದೆ.

ಮೃತರನ್ನು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಮಾದಪ್ಪ ( 72) ಎಂದು ಗುರುತಿಸಲಾಗಿದೆ.

ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವೆಲರ್ಸ್ ಆಂಡ್ ಬ್ಯಾಂಕರ್ಸ್ ನಲ್ಲಿ ಶನಿವಾರ ತಡರಾತ್ರಿ ದರೋಡೆ ನಡೆಸಲು ಸಂಚು ರೂಪಿಸಿದ್ದಾರೆ. ಅಂಗಡಿ ಬಾಗಿಲನ್ನು ಗ್ಯಾಸ್ ಕಟ್ಟರ್ ನಿಂದ ಕಟ್ ಮಾಡಿ ಒಳ ನುಗ್ಗಿರುವ ದರೋಡೆಕೋರರು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುವ ಶಬ್ದ ಉಂಟಾಗಿದೆ ಈ ವೇಳೆ ಪಕ್ಕದಲ್ಲಿದ್ದ ಶ್ರೀ ಮಹದೇಶ್ವರ ಹೋಟೇಲ್ ಮಾಲೀಕ ಮಾದಪ್ಪ ಅವರು ಹೋಟೇಲ್ ನಿಂದ ಹೊರಗೆ ಬಂದಿದ್ದಾರೆ. ದರೋಡೆಕೋರರು ಜ್ಯುವೆಲರಿ ಅಂಗಡಿಯಿಂದ ಬರುವಾಗ ಮಾದಪ್ಪ ದರೋಡೆಕೋರರನ್ನು ನೋಡಿದ್ದಾರೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಮಾದಪ್ಪ ಅವರ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ದರೋಡೆಕೋರರು ಜ್ಯುವೆಲರಿ ಅಂಗಡಿಯ ಸಿಸಿಟಿವಿಯ ಡಿವಿಆರ್ ಅನ್ನು ಹೊತ್ತು ಪರಾರಿಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್, ಪಿಎಸ್ಐ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನು ದರೋಡೆ ನಡೆದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲೇ 1 ತಿಂಗಳ ಹಿಂದೆ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಘಟನೆ ನಡೆದಿತ್ತು. ಕಿರುಗಾವಲು ಗ್ರಾಮದ ರಸ್ತೆಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಳವಡಿಸಿದ್ದ ಸಿಸಿಟಿವಿಗಳಿಗೆ ರೀಚಾರ್ಜ್ ಮಾಡಿಸದ ಪರಿಣಾಮ ದರೋಡೆಕೋರರ ಚಲನ ವಲನಗಳು ಕೂಡ ಸೆರೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ವಿರುದ್ಧ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!