ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಕೆಆರ್ ಪೇಟೆ ಪ್ರದೇಶದಲ್ಲಿ ನಡೆದ ಭೀಕರ ಅಗ್ನಿ ದುರಂತವು ಐವರ ಜೀವವನ್ನು ಕಸಿದುಕೊಂಡಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರಾದ ಬಾಲಕೃಷ್ಣ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡದಲ್ಲಿ ಅಗ್ನಿ ಅವಘಡ ತಪ್ಪಿಸಲು ಅಗತ್ಯವಿರುವ ಮೂಲಭೂತ ಸುರಕ್ಷತಾ ವ್ಯವಸ್ಥೆಗಳು ಇಲ್ಲದಿರುವುದು ದೊಡ್ಡ ನಿರ್ಲಕ್ಷ್ಯವೆಂದು ಪೊಲೀಸರು ತಿಳಿಸಿದ್ದು, ಈ ನಿರ್ಲಕ್ಷ್ಯವೇ ಜೀವಹಾನಿಗೆ ಕಾರಣವಾಗಿದೆಯೆಂಬ ಶಂಕೆ ವ್ಯಕ್ತವಾಗಿದೆ.
ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಕಾಯ್ ಅವರ ಮಾಹಿತಿ ಪ್ರಕಾರ, ಅಗ್ನಿ ಅವಘಡದಲ್ಲಿ ಮೃತಪಟ್ಟ ಮದನ್ ಸಿಂಗ್ ಅವರ ಸಹೋದರ ಗೋಪಾಲ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಪ್ರಸ್ತುತ ಈ ದುರಂತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ನಿನ್ನೆ ನಡೆದ ರಕ್ಷಣಾ ಕಾರ್ಯಾಚರಣೆ ಸುಮಾರು 15 ಗಂಟೆಗಳ ಕಾಲ ಮುಂದುವರಿಯಿತು. ಇವತ್ತು ಬೆಳಿಗ್ಗೆ ಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ. ತನಿಖೆಯ ಬಳಿಕ ಈ ಅವಘಡದ ನಿಜಸ್ವರೂಪ ಸ್ಪಷ್ಟವಾಗಲಿದೆ.
ಘಟನೆಯಲ್ಲಿ ಮದನ್ (38), ಅವರ ಪತ್ನಿ ಸಂಗೀತಾ (33), ಇಬ್ಬರು ಮಕ್ಕಳು ಮಿತೇಶ್ (8) ಮತ್ತು ವಿಹಾನ್ (5) ಜೀವ ಕಳೆದುಕೊಂಡರು. ಜೊತೆಗೆ ಮತ್ತೊಂದು ಮಹಡಿಯಲ್ಲಿ ವಾಸಿಸುತ್ತಿದ್ದ ಸುರೇಶ್ ಸಹ ಬೆಂಕಿಯಲ್ಲಿ ಸಜೀವ ದಹನಗೊಂಡಿದ್ದರು. ಗಾಯಾಳುಗಳಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.