ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಏಷ್ಯಾಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ಸಂಭಾವ್ಯ ಆಟಗಾರರ ಕುರಿತು ತೀವ್ರ ಚರ್ಚೆ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಕ ಮೊಹಮ್ಮದ್ ಕೈಫ್ ತಮ್ಮ ಆಯ್ಕೆಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ವಿಶೇಷವೆಂದರೆ, ಗಾಯದಿಂದ ಮರಳಿ ಬಂದಿದ್ದ ಕೆಎಲ್ ರಾಹುಲ್‌ಗೆ ಕೈಫ್ ತಮ್ಮ ತಂಡದಲ್ಲಿ ಸ್ಥಾನ ನೀಡಿಲ್ಲ. ಹಾಗೆಯೇ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಹೆಸರು ಸಹ ಕೈ ಬಿಡಲಾಗಿದೆ.
ಕೈಫ್ ನೀಡಿರುವ ಪಟ್ಟಿಯಲ್ಲಿ ಆರಂಭಿಕರಾಗಿ ಅಭಿಷೇಕ್ ಶರ್ಮಾ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಹಾಗೂ ನಾಲ್ಕನೇ ಕ್ರಮಾಂಕಕ್ಕೆ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಪಟ್ಟಿ ಮಾಡಿದ್ದಾರೆ. ಐದನೇ ಸ್ಥಾನದಲ್ಲಿ ಅಕ್ಷರ್ ಪಟೇಲ್ (ಉಪನಾಯಕ), ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಏಳನೇ ಸ್ಥಾನದಲ್ಲಿ ಶಿವಂ ದುಬೆ ಕಾಣಿಸಿಕೊಳ್ಳಲಿದ್ದಾರೆ. ಎಂಟನೇ ಕ್ರಮಾಂಕಕ್ಕೆ ವಾಷಿಂಗ್ಟನ್ ಸುಂದರ್ ಹೆಸರು ಸೇರಿದೆ.
ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ಪ್ರಮುಖರಾಗಿ ಆಯ್ಕೆಯಾಗಿದ್ದಾರೆ. ಹೆಚ್ಚುವರಿ ಆಟಗಾರರಾಗಿ ಶುಭ್‌ಮನ್ ಗಿಲ್, ಜಿತೇಶ್ ಶರ್ಮಾ, ವರುಣ್ ಚಕ್ರವರ್ತಿ ಹಾಗೂ ಮೊಹಮ್ಮದ್ ಸಿರಾಜ್ ಹೆಸರಿಸಲಾಗಿದೆ. ಗಿಲ್ ಅವರನ್ನು ಹೆಚ್ಚುವರಿ ಆರಂಭಿಕರಾಗಿ, ಜಿತೇಶ್ ಶರ್ಮಾ ಅವರನ್ನು ಎರಡನೇ ವಿಕೆಟ್ ಕೀಪರ್ ಆಗಿ, ವರುಣ್ ಚಕ್ರವರ್ತಿಯನ್ನು ಹೆಚ್ಚುವರಿ ಸ್ಪಿನ್ನರ್ ಆಗಿ ಹಾಗೂ ಸಿರಾಜ್ ಅವರನ್ನು ವೇಗಿ ಬೌಲರ್ ಆಗಿ ಸೂಚಿಸಲಾಗಿದೆ.
ಕೈಫ್ ನೀಡಿರುವ ಈ ತಂಡದಲ್ಲಿ ಅನುಭವ ಹಾಗೂ ಯುವ ಪ್ರತಿಭೆಗಳ ಸಮತೋಲನ ಕಣ್ಣಿಗೆ ಬೀಳುತ್ತದೆ. ಆದಾಗ್ಯೂ, ಅಧಿಕೃತ ಆಯ್ಕೆ ಸಮಿತಿ ಪ್ರಕಟಿಸುವ ಪಟ್ಟಿ ಹೇಗಿರುತ್ತದೆ ಎಂಬುದೇ ಈಗ ಕ್ರಿಕೆಟ್ ಪ್ರೇಮಿಗಳ ಕಾತರವಾಗಿದೆ.