ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ್ ತನ್ನ 17 ಸದಸ್ಯರ ತಂಡವನ್ನು ಘೋಷಿಸಿದೆ. ಆದರೆ ಈ ಬಾರಿ ತಂಡದ ಆಯ್ಕೆ ಸಾಕಷ್ಟು ಅಚ್ಚರಿಯ ನಿರ್ಧಾರಗಳಿಗೆ ಕಾರಣವಾಗಿದೆ. ದೇಶದ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ದಂತೆ ಮಾಜಿ ನಾಯಕ ಬಾಬರ್ ಆಝಂ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಈ ಇಬ್ಬರ ನಿರಾಶಾಜನಕ ಪ್ರದರ್ಶನವೇ ಅವರ ಹೊರಗುಳಿಯಲು ಪ್ರಮುಖ ಕಾರಣವಾಗಿದೆ ಎಂದು ಪಾಕ್ ಕ್ರಿಕೆಟ್ ಮೂಲಗಳು ತಿಳಿಸಿವೆ.
ಹೊಸ ತಂಡದಲ್ಲಿ ಸಲ್ಮಾನ್ ಅಲಿ ಅಘಾ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಆರಂಭಿಕರಾಗಿ ಫಖರ್ ಝಮಾನ್ ಹಾಗೂ ಯುವ ಆಟಗಾರ ಸೈಮ್ ಅಯ್ಯೂಬ್ ಅವಕಾಶ ಪಡೆದಿದ್ದಾರೆ. ವಿಕೆಟ್ ಕೀಪರ್ ಜವಾಬ್ದಾರಿ ಮೊಹಮ್ಮದ್ ಹ್ಯಾರಿಸ್ ಅವರಿಗೆ ನೀಡಲಾಗಿದೆ. ವೇಗಿಗಳಲ್ಲಿ ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್ ಹಾಗೂ ಶಾಹೀನ್ ಅಫ್ರಿದಿ ಪ್ರಮುಖ ಭರವಸೆ. ಸ್ಪಿನ್ನರ್ ವಿಭಾಗದಲ್ಲಿ ಅಬ್ರಾರ್ ಅಹ್ಮದ್ ಮತ್ತು ಸುಫಿಯಾನ್ ಮುಖಿಮ್ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಪಾಕಿಸ್ತಾನ್ ತಂಡವು ಏಷ್ಯಾಕಪ್‌ನಲ್ಲಿ ತನ್ನ ಅಭಿಯಾನವನ್ನು ಸೆಪ್ಟೆಂಬರ್ 12ರಂದು ಒಮಾನ್ ವಿರುದ್ಧ ದುಬೈನಲ್ಲಿ ಆರಂಭಿಸಲಿದೆ. ನಂತರ ಸೆಪ್ಟೆಂಬರ್ 14ರಂದು ಪಾರಂಪರಿಕ ಎದುರಾಳಿ ಭಾರತ ವಿರುದ್ಧದ ಹೈ ವೋಲ್ಟೇಜ್ ಪಂದ್ಯ ಕಾದಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ್ ಯುಎಇ ವಿರುದ್ಧ ಸೆಣಸಲಿದೆ. ಈ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡು ಗೆಲುವು ದಾಖಲಿಸಿದರೆ ಪಾಕ್ ತಂಡ ಸೂಪರ್-4 ಹಂತಕ್ಕೇರಲಿದೆ.
ಬಾಬರ್ ಹಾಗೂ ರಿಝ್ವಾನ್ ಅವರಿಲ್ಲದ ಪಾಕಿಸ್ತಾನ್ ತಂಡ ಹೊಸ ಮುಖಗಳಿಂದ ಕೂಡಿದ ಹೊಸ ಸಂಯೋಜನೆಯಂತೆ ಕಾಣುತ್ತಿದೆ. ಸಲ್ಮಾನ್ ಅಲಿ ಅಘಾ ನೇತೃತ್ವದಲ್ಲಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಪಾಕ್ ತಂಡ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.