ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಅಧಿವೇಶನದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಎಸ್ಐಟಿ (SIT) ತನಿಖೆ ಕುರಿತು ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಠಾಣೆಗೆ ಹೋಗಿ ಓರ್ವ ದೂರು ಕೊಟ್ಟಿದ್ದನು. ನನಗೆ ನಿರಂತರ ಜೀವ ಬೆದರಿಕೆವೊಡ್ಡಿ ಶವ ಹೂತಿದ್ದ ಬಗ್ಗೆ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಅಪರಿಚಿತ ದೂರು ಕೊಟ್ಟಿದ್ದನು. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸಹ ಕೇಳಿದ್ದನು. ಇದಾದ ಬಳಿಕ ಪೊಲೀಸರು ದೂರು ದಾಖಲಿಸಿದ್ದಾರೆ. ಬಳಿಕ ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ 164ರಡಿ ಹೇಳಿಕೆ ದಾಖಲಿಸಿದ್ದರು. ಬಳಿಕ ನ್ಯಾಯಾಧೀಶರು ತನಿಖೆಗೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಮದ್ಯೆ ರಾಜ್ಯ ಮಹಿಳಾ ಆಯೋಗ ಮುಖ್ಯಮಂತ್ರಿಗಳಿಗೆ ಎಸ್ಐಟಿ ರಚಿಸುವಂತೆ ಪತ್ರ ಬರೆದಿತ್ತು. ಎಸ್ಐಟಿ ಏಕೆ ರಚಿಸಬೇಕೆಂದೂ ಮಹಿಳಾ ಆಯೋಗ ಪತ್ರದಲ್ಲಿ ಉಲ್ಲೇಖಿಸಿತ್ತು ಎಂದರು.
ಇದಾದ ಬಳಿಕ ನಾನು, ಮುಖ್ಯಮಂತ್ರಿ ಸಿದ್ಧರಾಮಯ್ಯ ಎಸ್ಐಟಿ ರಚನೆಗೆ ಆದೇಶ ನೀಡಿದ್ದೆವು. ಐಪಿಎಸ್ ಡಾ .ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿತ್ತು ಎಂಬುದಾಗಿ ಸದನಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರಿಸಿದರು.
ಬಳಿಕ ಎಸ್ಐಟಿ ತಂಡ ಧರ್ಮಸ್ಥಳ ಠಾಣೆಯಿಂದ ತನಿಖೆ ಪಡೆದು ಮುಂದಿನ ತನಿಖೆ ನಡೆಸಿದರು. ಅಪರಿಚಿತನಿಂದ ಎಸ್ಐಟಿ ಹೇಳಿಕೆ ಪಡೆದಿತ್ತು. ಅಪರಿಚಿತನಿಂದ ಹೇಳಿಕೆ ಪಡೆದ ಬಳಿಕ ಮ್ಯಾಪಿಂಗ್ ಮಾಡಲಾಗಿತ್ತು. ಬಳಿಕ ಆತ ಹೇಳಿದ ಪೈಕಿ ಎರಡು ಜಾಗದಲ್ಲಿ ಅಸ್ಥಿಪಂಜರ, ಮೂಳೆ, ಬುರುಡೆ ಪತ್ತೆಯಾಗಿದೆ. ಒಂದು ಜಾಗದಲ್ಲಿ ಅಸ್ಥಿಪಂಜರ ಸಿಗುತ್ತೆ, ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಮತ್ತೊಂದು ಜಾಗದಲ್ಲಿ ಮೂಳೆ, ಬುರುಡೆ ಪತ್ತೆಯಾಗಿದ್ದವು. ಮೂಳೆ ಹಾಗೂ ಬುರುಡೆಗಳನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಉಳಿದ ಜಾಗದಲ್ಲಿ ಲ್ಯಾಟರೈಟ್ ಮಣ್ಣು ಇದ್ದು, ಯಾವುದೇ ವಸ್ತುಗಳಿದ್ದರೂ ಬೇಗನೇ ಕೊಳೆತು ಕರಗಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಗೆದ ಮಣ್ಣನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈವರೆಗೆ ಅಸ್ತಿಪಂಜರ ಸಿಕ್ಕಿದ ಜಾಗಗಳ ಹಾಗೂ ಮೂಳೆಗಳ ಬಗ್ಗೆ ವಿಶ್ಲೇಷಣೆ ಆಗಬೇಕಿದೆ. ಈವರೆಗೆ ತನಿಖೆಯೇ ಆರಂಭ ಆಗಿಲ್ಲ. ಇದೆಲ್ಲವೂ ತನಿಖೆಯ ಪೂರ್ವ ಭಾಗವಾಗಿದೆ. ಅಸ್ತಿಪಂಜರದ ವರದಿಗಳು, ಮಣ್ಣಿನ ಪರೀಕ್ಷಾ ವರದಿಗಳು ಹಾಗೂ ವಿಶ್ಲೇಷಣಾ ವರದಿಗಳು ಬಂದ ನಂತರವೇ ತನಿಖೆ ಆರಂಭ ಆಗಲಿದೆ ಎಂದರು.
ಇನ್ನುಮುಂದೆ ತನಿಖೆ ತುಂಬಾ ಗಂಭೀರವಾಗಿ ನಡೆಯುತ್ತದೆ. ಪಾರದರ್ಶಕವಾಗಿ, ಯಾರದೇ ಒತ್ತಡಕ್ಕೆ ಮಣಿಯದ ರೀತಿಯಲ್ಲಿ, ತನಿಖೆಯ ದಿಕ್ಕನ್ನು ತಪ್ಪಿಸಲು ಅವಕಾಶ ಇಲ್ಲದ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ದೂರುದಾರ ವ್ಯಕ್ತಿ ತೋರಿಸಿದ ಕಡೆಗಳಲ್ಲಿ ಅಗಿಯಲಾಗುತ್ತದೆ. ಅವನು ಇಡೀ ಧರ್ಮಸ್ಥಳವನ್ನು ಅಗೆಯಲು ಹೇಳಿದರೆ ಅದನ್ನು ಮಾಡುವುದಿಲ್ಲ. ಆದರೆ, ಕೆಲವೊಂದು ಜಾಗಗಳಲ್ಲಿ ತೀರಾ ಅನುಮಾನ ಇದ್ದಲ್ಲಿ ಅಗೆದು ಶೋಧ ಮಾಡಲಾಗುತ್ತದೆ ಎಂದರು.