ನಾಳೆಯಿಂದ 64ನೇ ಸುಬ್ರೋಟೋ ಕಪ್ ಶುರು: 106 ತಂಡಗಳು ಭಾಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಬ್ರೋಟೋ ಕಪ್ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್ ತನ್ನ 64ನೇ ಆವೃತ್ತಿಯನ್ನು 106 ತಂಡಗಳೊಂದಿಗೆ ಆರಂಭಿಸಲಿದೆ. ಜೂನಿಯರ್ ಹುಡುಗರ, ಜೂನಿಯರ್ ಹುಡುಗಿಯರ ಹಾಗೂ ಸಬ್-ಜೂನಿಯರ್ ಹುಡುಗರು. ಈ ಮೂರು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಟೂರ್ನಮೆಂಟ್ ಆಗಸ್ಟ್ 19ರಿಂದ ಸೆಪ್ಟೆಂಬರ್ 25ರವರೆಗೆ ದೆಹಲಿ-ಎನ್‌ಸಿಆರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ.

ಈ ಕುರಿತು ಆಕಾಶ್ ಆಫೀಸರ್ಸ್ ಮೆಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಾಯುಮಾರ್ಷಲ್ ಎಸ್. ಶಿವಕುಮಾರ್ VSM, ಏರ್ ಆಫೀಸರ್-ಇನ್-ಚಾರ್ಜ್ ಆಡಳಿತ ಹಾಗೂ ಉಪಾಧ್ಯಕ್ಷ, ಸುಬ್ರೋಟೋ ಮುಖರ್ಜಿ ಕ್ರೀಡಾ ಶಿಕ್ಷಣ ಸಮಾಜ (SMSES) ಮುಖ್ಯ ಅತಿಥಿಯಾಗಿ ಹಾಜರಿದ್ದರು. ಭಾರತೀಯ ಫುಟ್ಬಾಲ್ ಆಟಗಾರ್ತಿ ದಲಿಮಾ ಛಿಬರ್ ವಿಶೇಷ ಅತಿಥಿಯಾಗಿ ಭಾಗವಹಿಸಿದರು.

ಸುಬ್ರೋಟೋ ಕಪ್ ಅನ್ನು ಸುಬ್ರೋಟೋ ಮುಖರ್ಜಿ ಕ್ರೀಡಾ ಶಿಕ್ಷಣ ಸಮಾಜವು ವಾಯುಪಡೆ ಕ್ರೀಡಾ ನಿಯಂತ್ರಣ ಮಂಡಳಿಯ ಆಶ್ರಯದಲ್ಲಿ ಆಯೋಜಿಸುತ್ತದೆ. ಈ ಟೂರ್ನಮೆಂಟ್ ಮೊದಲ ಬಾರಿಗೆ 1960ರಲ್ಲಿ ನಡೆದಿದ್ದು, ಇದಕ್ಕೆ ವಾಯುಮಾರ್ಷಲ್ ಸುಬ್ರೋಟೋ ಮುಖರ್ಜಿ ಅವರ ಹೆಸರನ್ನು ಇಡಲಾಗಿದೆ. ಅವರು ಕ್ರೀಡೆಗೆ ನೆಲಮಟ್ಟದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಈ ಸ್ಪರ್ಧೆಯ ಪರಿಕಲ್ಪನೆ ಮಾಡಿದ್ದರು.

ಟೂರ್ನಮೆಂಟ್ ಆಗಸ್ಟ್ 19ರಂದು ದೆಹಲಿ-ಎನ್‌ಸಿಆರ್‌ನಲ್ಲಿ ಜೂನಿಯರ್ ಹುಡುಗಿಯರ (ಅಂಡರ್-17) ವಿಭಾಗದೊಂದಿಗೆ ಆರಂಭವಾಗುತ್ತದೆ. ಸಬ್-ಜೂನಿಯರ್ ಹುಡುಗರ (ಅಂಡರ್-15) ವಿಭಾಗವು ಸೆಪ್ಟೆಂಬರ್ 2ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಅಂತಿಮ ಹಂತ ಜೂನಿಯರ್ ಹುಡುಗರ (ಅಂಡರ್-17) ವಿಭಾಗ ಸೆಪ್ಟೆಂಬರ್ 16ರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಆರಂಭವಾಗುತ್ತದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಾಯುಮಾರ್ಷಲ್ ಎಸ್. ಶಿವಕುಮಾರ್ ಅವರು, ಭಾರತೀಯ ವಾಯುಪಡೆ ಮತ್ತು SMSES ಪ್ರತಿವರ್ಷ ಈ ಟೂರ್ನಮೆಂಟ್ ಅನ್ನು ದೊಡ್ಡದು ಮತ್ತು ಉತ್ತಮವಾಗಿಸಲು ಬದ್ಧವಾಗಿದೆ. ಇದು ಯುವ ಕ್ರೀಡಾಪಟುಗಳಿಗೆ ತಮ್ಮ ವೃತ್ತಿಜೀವನದಲ್ಲಿ ಮುಂದಿನ ಹಂತಕ್ಕೆ ಏರಲು ವೇದಿಕೆಯನ್ನು ಒದಗಿಸುತ್ತದೆ. ಟೂರ್ನಮೆಂಟ್‌ಗೆ ಅರ್ಹತೆಯನ್ನು ಪಡೆದ ಎಲ್ಲಾ ತಂಡಗಳಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಅವರು ಕ್ರೀಡೆಯ ನಿಜವಾದ ಮನೋಭಾವದಿಂದ ಆಟವಾಡಲಿ ಎಂದು ಹೇಳಿದರು.

ಇಂಡಿಯನ್ ಟೈಗರ್ ಮತ್ತು ಟೈಗ್ರೆಸ್ ಕ್ಯಾಂಪೇನ್ ಭಾಗವಾಗಿ, ಸ್ಕೌಟಿಂಗ್ ಸುತ್ತಿನಿಂದ ಏಳು ಆಟಗಾರರನ್ನು ಜರ್ಮನಿಯಲ್ಲಿ ಉನ್ನತ ಮಟ್ಟದ ಫುಟ್ಬಾಲ್ ತರಬೇತಿಗಾಗಿ ಆಯ್ಕೆ ಮಾಡಲಾಗುತ್ತದೆ.

ದೆಹಲಿ,ಎನ್‌ಸಿಆರ್‌ನಲ್ಲಿ ಅಂಬೇಡ್ಕರ್ ಕ್ರೀಡಾಂಗಣ, ತೇಜಸ್ ಫುಟ್ಬಾಲ್ ಮೈದಾನ, ಸುಬ್ರೋಟೋ ಪಾರ್ಕ್ ಫುಟ್ಬಾಲ್ ಮೈದಾನ ಮತ್ತು ಪಿಂಟೋ ಪಾರ್ಕ್ ಫುಟ್ಬಾಲ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಬೆಂಗಳೂರಿನಲ್ಲಿ ಏರ್ ಫೋರ್ಸ್ ಶಾಲೆ, ಜಲಹಳ್ಳಿ; ಏರ್ ಫೋರ್ಸ್ ಶಾಲೆ, ಯೆಲಹಂಕ; ಮತ್ತು ಎಚ್‌ಕ್ಯೂ ಟ್ರೈನಿಂಗ್ ಕಮಾಂಡ್ ಫುಟ್ಬಾಲ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ಮೂರು ವಿಭಾಗಗಳಲ್ಲಿ ಭಾಗವಹಿಸುವ ಒಟ್ಟು 106 ತಂಡಗಳು ದೇಶದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳನ್ನು ಪ್ರತಿನಿಧಿಸಲಿವೆ, ಜೊತೆಗೆ ನಾಲ್ಕು ವಿದೇಶಿ ದೇಶಗಳ ತಂಡಗಳೂ ಭಾಗವಹಿಸಲಿವೆ. ಎಲ್ಲಾ ವಿಭಾಗಗಳಲ್ಲಿ ಒಟ್ಟು 200ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಲಾಗಿದೆ.

ಸಬ್-ಜೂನಿಯರ್ ಹುಡುಗರ ವಿಭಾಗದಲ್ಲಿ ಎಲ್ಲ ತಂಡಗಳಿಗೆ ಸಮನ್ಯಾಯ ಕಾಪಾಡಲು ವಯೋನಿರ್ಣಯ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ.

63ನೇ ಆವೃತ್ತಿಯಲ್ಲಿ, ಜೂನಿಯರ್ ಹುಡುಗರ ವಿಭಾಗದಲ್ಲಿ ಟಿಜಿ ಇಂಗ್ಲಿಷ್ ಶಾಲೆ, ಬಿಷ್ಣುಪುರ, ಮಣಿಪುರ ಚಾಂಪಿಯನ್ ಆಗಿತ್ತು; ಜೂನಿಯರ್ ಹುಡುಗಿಯರ ವಿಭಾಗದಲ್ಲಿ ಮಾದರ್ ಇಂಟರ್‌ನ್ಯಾಶನಲ್ ಶಾಲೆ, ರಾಂಚಿ, ಜಾರ್ಖಂಡ್ ತನ್ನ ಪ್ರಶಸ್ತಿಯನ್ನು ಉಳಿಸಿತು; ಸಬ್-ಜೂನಿಯರ್ ಹುಡುಗರ ವಿಭಾಗದಲ್ಲಿ ನೊಂಗಿರಿ ಪ್ರೆಸ್ಬಿಟೇರಿಯನ್ ಸೆಕೆಂಡರಿ ಶಾಲೆ, ಮೇಘಾಲಯ ಪ್ರಶಸ್ತಿ ಗೆದ್ದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!