ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲಾ ರೀತಿಯ ಸಂಬಂಧಗಳಿಗೆ ಸದ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದೆ. ಇದರ ಪರಿಣಾಮ ಕ್ರೀಡೆಯ ಮೇಲೂ ಗೋಚರಿಸಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಭಾರತದ ಹೊರಗೂ ನಡೆಯುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ.
ಇದೀಗ ಯುಎಇಯಲ್ಲಿ ನಡೆಯಬೇಕಿರುವ ಟಿ20 ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ, ಪಾಕ್ ವಿರುದ್ಧ ಆಡಬಾರದು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ನಡುವೆ ಇದೇ ಆಗಸ್ಟ್ 29 ರಿಂದ ಬಿಹಾರದ ರಾಜ್ಗಿರ್ನಲ್ಲಿ ಆರಂಭವಾಗಲಿರುವ 2025 ರ ಪುರುಷರ ಹಾಕಿ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
ಭಾರತ ಸರ್ಕಾರ ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಸಿದ್ಧವಾಗಿದೆ. ಆದರೆ ಪಾಕಿಸ್ತಾನ ಹಾಕಿ ಫೆಡರೇಶನ್ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಇದರಿಂದಾಗಿ ಬದಲಿ ಆಯ್ಕೆಯನ್ನು ಹುಡುಕಲು ಶುರು ಮಾಡಿರುವ ಆಯೋಜಕರು ಪಾಕಿಸ್ತಾನದ ಬದಲಿಗೆ ಬಾಂಗ್ಲಾದೇಶ ತಂಡವನ್ನು ಆಡಲು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ತಂಡಕ್ಕೆ ಸಿಗುತ್ತ ಅವಕಾಶ?
ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಹೇಳಿದೆ. ಆದಾಗ್ಯೂ ಪಾಕ್ ತಂಡ ಭಾರತಕ್ಕೆ ಬರಲು ಬಯಸದಿದ್ದರೆ ಅದು ನಮ್ಮ ಸಮಸ್ಯೆಯಲ್ಲ ಎಂದು ಹಾಕಿ ಇಂಡಿಯಾ ಅಧಿಕಾರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನ ಬರದಿದ್ದರೆ ಬಾಂಗ್ಲಾದೇಶವನ್ನು ಭಾಗವಹಿಸಲು ಈಗಾಗಲೇ ಆಹ್ವಾನಿಸಲಾಗಿದೆ, ಆದರೆ ದೃಢೀಕರಣಕ್ಕಾಗಿ ನಾವು ಇನ್ನೂ ಎರಡು ದಿನ ಕಾಯಬೇಕಾಗುತ್ತದೆ. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸ್ಪಷ್ಟವಾಗುತ್ತದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.