ಬರೋಬ್ಬರಿ ಎಂಟು ಮಿಲಿಯನ್‌ ಡಾಲರ್‌ ತಲುಪಿದ ಬಾಹ್ಯಾಕಾಶ ಅರ್ಥವ್ಯವಸ್ಥೆ: ಐತಿಹಾಸಿಕ ದಾಖಲೆ ಬರೆದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಬಾಹ್ಯಾಕಾಶ ಕ್ಷೇತ್ರ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿದ್ದು, ಬಾಹ್ಯಾಕಾಶ ಅರ್ಥವ್ಯವಸ್ಥೆಯು ಎಂಟು ಮಿಲಿಯನ್‌ ಡಾಲರ್‌ಗೆ ತಲುಪಿದೆ. ಇದು ಐತಿಹಾಸಿಕ ದಾಖಲೆಯಾಗಿದ್ದು, 8 ರಿಂದ 10 ವರ್ಷಗಳಲ್ಲಿ ಇನ್ನೂ ಐದಾರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಬಾಹ್ಯಾಕಾಶ ರಾಜ್ಯ ಸಚಿವ ಜೀತೇಂದ್ರ ಸಿಂಗ್‌ ಲೋಕಸಭೆಯಲ್ಲಿಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಭಾರತದ ಸಾಧನೆ ಹಾಗೂ ಭಾರತದ ಮೊದಲ ಗಗನಯಾತ್ರಿ ಶುಭಾಂಶು ಶುಕ್ಲಾ ಕುರಿತು ವಿಶೇಷ ಚರ್ಚೆಯಲ್ಲಿ ಅವರು, ಇದೇ ವೇಗದಲ್ಲಿ ಬಾಹ್ಯಾಕಾಶ ಕ್ಷೇತ್ರ ಸಾಧನೆ ಮಾಡಿದರೆ ಭಾರತದ ಅರ್ಥವ್ಯವಸ್ಥೆ ಮೊದಲ ಸ್ಥಾನಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು.

ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಸ್ಟಾರ್ಟ್‌ಅಪ್‌ ಸಾಧ್ಯ ಎನ್ನುವುದು ಕನಸೇ ಎಂದುಕೊಂಡ ಕಾಲವಿತ್ತು. ಆದರೆ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹುಸಿ ಮಾಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ವಿಶ್ವ ದರ್ಜೆಯ ಸ್ಟಾರ್ಟ್ ಅಪ್‌ ಸ್ಥಾಪನೆಯಾಗಿದೆ. ಚಂದ್ರನಲ್ಲಿ ಜಲವನ್ನು ಪತ್ತೆ ಹಚ್ಚುವುದರಿಂದ ಹಿಡಿದು, ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗಗನಯಾನ ಮಾಡುವವರೆಗೆ ಇಡೀ ವಿಶ್ವ ಭಾರತದ ಸಾಧನೆಯನ್ನು ಬೆರಗುಗಣ್ಣುಗಳಿಂದ ನೋಡಿದೆ ಎಂದು ಹೇಳಿದರು. ಆಕ್ಸಿಯಮ್-4 ಮಿಷನ್ ನಂತರ ಮರಳಿದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆ ಸಲ್ಲಿಸಿದ ಸಚಿವ ಜೀತೇಂದ್ರ ಸಿಂಗ್‌, ಇದು ಭಾರತಕ್ಕೆ ಸಂದಿರುವ ಅತಿ ದೊಡ್ಡ ಗೌರವವಾಗಿದೆ. ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. 1984 ರಲ್ಲಿ ಸೋವಿಯತ್ ಬಾಹ್ಯಾಕಾಶ ನೌಕೆಯಲ್ಲಿ ಹಾರಾಟ ನಡೆಸಿದ ನಂತರ ನಾಲ್ಕು ದಶಕಗಳಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಗಗನಯಾತ್ರಿ ಎಂಬ ಕೀರ್ತಿಗೆ ಶುಭಾಂಶು ಶುಕ್ಲಾ ಭಾಜನರಾಗಿದ್ದಾರೆ ಎಂದರು.

ಕೆಲವೇ ವರ್ಷಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವು ಬೇರೆ ದೇಶಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಇಂದು ಬೇರೆ ದೇಶಗಳು ಭಾರತದತ್ತ ದೃಷ್ಟಿ ಹಾಯಿಸಿವೆ. ಭಾರತದ ನೆರವು ಪಡೆದುಕೊಳ್ಳುತ್ತಿವೆ. ಇದು ಕಳೆದ ಹನ್ನೊಂದು ವರ್ಷಗಳಲ್ಲಿ ಆಗಿರುವ ಸಾಧನೆಯಾಗಿದೆ ಎಂದು ಹೇಳಿದರು. 2035 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸಲು ಮತ್ತು 2040 ರ ವೇಳೆಗೆ ಚಂದ್ರನ ಮೇಲೆ ಭಾರತದ ಗಗನಯಾತ್ರಿಯನ್ನು ಇಳಿಸುವ ಗುರಿ ಹೊಂದಲಾಗಿದೆ. 2047 ರ ವಿಕಸಿತ ಭಾರತದ ಗುರಿ ತಲುಪುವ ಮುಂಚೆಯೇ ಈ ಗುರಿಯನ್ನು ಸಾಧಿಸಲಾಗುವುದು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!