ಹೊಸದಿಗಂತ ವರದಿ, ದಾವಣಗೆರೆ:
ಇ-ಸ್ವತ್ತು ಮತ್ತು ಖಾತೆ ಬದಲಾವಣೆ ಮಾಡಿಸಲು ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಪಲ್ಲಾಗಟ್ಟೆ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.
ಪಲ್ಲಾಗಟ್ಟೆ ಗ್ರಾಪಂ ಪಿಡಿಓ ಶಶಿಧರ ಪಾಟೀಲ್ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಅಧಿಕಾರಿ. ಸೂರಗೊಂಡನಹಳ್ಳಿ ಗ್ರಾಮದ ರೈತ ಎಸ್.ಸಿ.ಅಶೋಕ ಎಂಬುವರು ತಮ್ಮ ಮೂರು ಮನೆಗಳ ಇ-ಸ್ವತ್ತು ಮತ್ತು ಖಾತೆ ಬದಲಾವಣೆ ಮಾಡಿಸಲು ಪಲ್ಲಾಗಟ್ಟೆ ಗ್ರಾಪಂ ಕಚೇರಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರು. ಪಿಡಿಓ ಶಶಿಧರ ಪಾಟೀಲ್ ಇದಕ್ಕಾಗಿ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಪಲ್ಲಾಗಟ್ಟೆ ಗ್ರಾಪಂ ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದ ಪಿಡಿಓ ಶಶಿಧರ ಪಾಟೀಲ್ ರನ್ನು ಲಂಚದ ಹಣದ ಸಮೇತ ಬಂಧಿಸಿದ್ದಾರೆ. ಇವರ ವಿರುದ್ಧ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.