ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮತ ಕಳ್ಳತನದ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದೆ.
ಇಂದು (ಸೋಮವಾರ) ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್ಜೆಡಿ, ಸಿಪಿಐ, ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಮತ್ತು ಇತರ ಪಕ್ಷಗಳ ನಾಯಕರು , ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಿಜೆಪಿ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿವೆ.
ಚುನಾವಣಾ ಆಯುಕ್ತರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮತ್ತು ಮತದಾರರ ಪಟ್ಟಿ ಅಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಟೀಕಿಸಿವೆ
ಮತದಾನದ ಹಕ್ಕು ಸಾಮಾನ್ಯ ನಾಗರಿಕರಿಗೆ ಸಂವಿಧಾನವು ನೀಡಿದ ಪ್ರಮುಖ ಹಕ್ಕು. ಪ್ರಜಾಪ್ರಭುತ್ವವು ಅದರ ಮೇಲೆ ಅವಲಂಬಿತವಾಗಿದೆ. ಚುನಾವಣಾ ಆಯೋಗವು ಅದನ್ನು ರಕ್ಷಿಸಲು ಇರುವ ಸಂಸ್ಥೆಯಾಗಿದೆ. ವಿರೋಧ ಪಕ್ಷಗಳು ಕೇಳಿದ ಮಾನ್ಯ ಪ್ರಶ್ನೆಗಳಿಗೆ ಚುನಾವಣಾ ಆಯೋಗ ಉತ್ತರಿಸಬೇಕಾಗಿತ್ತು ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಕೂಡ ಚುನಾವಣಾ ಆಯೋಗವು ಕರ್ತವ್ಯ ಲೋಪ ಎಸಗಿದೆ ಎಂದು ಆರೋಪಿಸಿದ್ದಾರೆ.
ಎಸ್ಪಿ ನಾಯಕ ರಾಮಗೋಪಾಲ್ ಯಾದವ್ ಕೂಡ ಹೇಳಿಕೆ ನೀಡಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ದೂರಿನೊಂದಿಗೆ ಅಫಿಡವಿಟ್ ನೀಡುವಂತೆ ಚುನಾವಣಾ ಆಯೋಗ ಕೇಳುತ್ತಿದ್ದರೆ, ಎಸ್ಪಿ 2022ರಲ್ಲಿ ಸುಮಾರು 18,000 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ದೂರುಗಳೊಂದಿಗೆ ಅಫಿಡವಿಟ್ಗಳನ್ನು ಸಲ್ಲಿಸಿದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ.