ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೇವಲ 8 ಗಂಟೆಗಳಲ್ಲಿ ಬರೊಬ್ಬರಿ 177 ಮಿ.ಮೀ ಮಳೆಯಾಗಿದ್ದು, ವಾಣಿಜ್ಯ ನಗರಿ ಅಕ್ಷರಶಃ ಸ್ತಬ್ಧವಾಗಿದೆ.
ಸೋಮವಾರ ಸತತ ಮೂರನೇ ದಿನವೂ ಸುರಿದ ಭಾರೀ ಮಳೆಯ ನಂತರ ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡವು. ಅಂಧೇರಿ ಸಬ್‌ವೇ ಮತ್ತು ಲೋಖಂಡ್‌ವಾಲಾ ಕಾಂಪ್ಲೆಕ್ಸ್‌ನಂತಹ ಕೆಲವು ತಗ್ಗು ಪ್ರದೇಶಗಳಲ್ಲಿ ಕೆಲವು ಸ್ಥಳಗಳಲ್ಲಿ ನೀರು ಸಂಗ್ರಹವಾಗಿದ್ದು, ಸಂಚಾರದ ಮೇಲೆ ಪರಿಣಾಮ ಬೀರಿತು. ಮಹಾನಗರದ ಜೀವನಾಡಿ ಎಂದು ಪರಿಗಣಿಸಲಾದ ಸ್ಥಳೀಯ ರೈಲುಗಳು 8 ರಿಂದ 10 ನಿಮಿಷಗಳ ಕಾಲ ತಡವಾಗಿ ಓಡುತ್ತಿದ್ದವು ಮತ್ತು ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾರಿ ಮಳೆಗೆ ತತ್ತರಿಸಿಹೋಗಿರುವ ಮುಂಬೈನಲ್ಲಿ ಮಂಗಳವಾರವೂ ಭಾರಿಮಳೆಯಾಗುವ ಸಾಧ್ಯತೆ ಇದ್ದು, ಹೀಗಾಗಿ ಇಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಉಳಿದಂತೆ ರತ್ನಗಿರಿ ಜಿಲ್ಲೆಗೆ ಕೆಂಪು ಎಚ್ಚರಿಕೆ ನೀಡಿದ್ದು, ಸೋಮವಾರ ಮತ್ತು ಮಂಗಳವಾರ ಸಿಂಧುದುರ್ಗಕ್ಕೆ ಆರೆಂಜ್ ಅಲರ್ಟ್ ನೀಡಿದೆ.
ಮಳೆ ಪರಿಣಾಮ ಕಾರ್ಮಿಕರಿಗೆ ಸಂಜೆ 4 ಗಂಟೆಗೆ ಮನೆಗೆ ಹೋಗಲು ಅವಕಾಶ ನೀಡುವಂತೆ ಕಚೇರಿಗಳಿಗೆ ತಿಳಿಸಲಾಗಿದೆ. ಸಂಜೆ 6.30 ರ ನಂತರ, ಭಾರಿ ಮಳೆಯಾಗುವ ಕುರಿತು ನಿರೀಕ್ಷಿಸಲಾಗಿದೆ. ಮಂಗಳವಾರ ಶಾಲೆಗಳನ್ನು ಮುಚ್ಚುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾಗರಿಕರು ಕಾರಣವಿಲ್ಲದೆ ಹೊರಗೆ ಹೋಗಬಾರದು. ಅಂತೆಯೇ ರಾಜ್ಯಾದ್ಯಂತ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಬೆಳೆಗಳು ಬಾಧಿತವಾಗಿವೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ವಿಮಾನ ಸೇವೆ ಅಸ್ತವ್ಯಸ್ಥ
ಮಳೆ ಮತ್ತು ರನ್ ವೇ ಮೇಲೆ ನೀರು ನಿಂತ ಪರಿಣಾಮ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದೆ. ಮುಂಬೈ ವಿಮಾನ ನಿಲ್ದಾಣದ ವಕ್ತಾರರು, ಒಂಬತ್ತು ವಿಮಾನಗಳು ಅಂತಿಮವಾಗಿ ಇಳಿಯುವ ಮೊದಲು ಆಗಸದಲ್ಲಿ ಕೆಲಸುತ್ತು ಚಲಿಸಿದವು, ಆದರೆ ಒಂದು ವಿಮಾನವನ್ನು ಭಾರೀ ಮಳೆಯಿಂದಾಗಿ ಮಧ್ಯಾಹ್ನ 12 ಗಂಟೆಗೆ ಸೂರತ್‌ಗೆ (ಗುಜರಾತ್‌ನಲ್ಲಿ) ತಿರುಗಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ರಸ್ತೆ ಸಂಚಾರ ಅಸ್ತವ್ಯಸ್ಥ
ಇನ್ನು ಭಾರಿ ಮಳೆಯಿಂದಾಗಿ ಮುಂಬೈ ನಗರದ ಕೆಲವು ಭಾಗಗಳಲ್ಲಿ ನೀರು ನಿಂತ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್) ಸಂಸ್ಥೆಯ ಬಸ್ ಸೇವೆಗಳ ಯಾವುದೇ ಮಾರ್ಗಗಳನ್ನು ಬದಲಾಯಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.