ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಒಂದೇ ರಾತ್ರಿ ಎಂಟು ಕೆಳ ಹಂತದ ಸೇತುವೆಗಳು ಮತ್ತೆ ಜಲಾವೃತವಾಗಿವೆ.
ಸೇತುವೆಗಳು ಜಲಾವೃತವಾದ ಹಿನ್ನೆಲೆಯಲ್ಲಿ 16 ಗ್ರಾಮಗಳ ಸಂಪರ್ಕ ಕಡಿತವಾಗಿದ್ದು ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ.
ವೇದ ಗಂಗಾ, ದೂದಗಂಗಾ ಮತ್ತು ಕೃಷ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನಿಪ್ಪಾಣಿ ತಾಲೂಕಿನಲ್ಲಿ ಹರಿಯುವ ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ ಬಾರವಾಡ-ಕುನ್ನೂರ ಸೇತುವೆ ಜಲಾವೃತವಾದರೆ, ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಜಲಾವೃತವಾಗಿವೆ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಕ್ಸಂಬಾ-ದತ್ತವಾಡ, ಕಲ್ಲೋಳ-ಯಡೂರ, ಬಾವನಸೌದತ್ತಿ-ಮಾಂಜರಿ ಸೇತುವೆ ಮುಳುಗಡೆಯಾಗಿವೆ. ಕೃಷ್ಣಾ ನದಿಯ ಒಳ ಹರಿವು 67 ಸಾವಿರ ಕ್ಯೂಸೆಕ್ಗೆ ಏರಿಕೆಯಾಗಿದೆ.