ಮಾನವನ ದೇಹದಲ್ಲಿ ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಮುಖ್ಯವಾದ ಅಂಗಗಳಾದರೂ, ಎಲ್ಲ ಅಂಗಗಳನ್ನು ಒಂದೇ ತಂತಿಯಲ್ಲಿ ಹಿಡಿದು ನಡೆಸುವ ಶಕ್ತಿ ಮೆದುಳಿನಲ್ಲಿದೆ. ಮೆದುಳು ಕೇವಲ ಆಲೋಚನೆ, ನೆನಪು, ನಿರ್ಧಾರ ಅಥವಾ ಕಲ್ಪನೆಗಳನ್ನು ಮಾತ್ರ ನಡೆಸುವುದಲ್ಲ, ನಮ್ಮ ಜೀವನ ಶೈಲಿ, ಆರೋಗ್ಯ ಹಾಗೂ ಭಾವನೆಗಳನ್ನೂ ನೇರವಾಗಿ ನಿಯಂತ್ರಿಸುತ್ತದೆ. ಆದ್ದರಿಂದ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.
ಮಗು ಹುಟ್ಟಿದಾಗ ಮೆದುಳಿನ ಸೆಲ್ಗಳು ಬೆಳೆಯುತ್ತವೆ, ಆ ಬೆಳವಣಿಗೆಯೇ ಅವರ ಜ್ಞಾನವನ್ನು ರೂಪಿಸುತ್ತದೆ. ಆದ್ದರಿಂದ ಮಕ್ಕಳಿಗೆ ಹೊಸದನ್ನು ಕಲಿಸುವುದು, ಆಟಗಳಲ್ಲಿ ತೊಡಗಿಸುವುದು, ಕಲೆಗಳನ್ನು ಪರಿಚಯಿಸುವುದು ಅತ್ಯಂತ ಮುಖ್ಯ. ವಯಸ್ಸು ಹೆಚ್ಚಾದಂತೆ ಮೆದುಳಿನ ಸೆಲ್ಗಳ ಚಟುವಟಿಕೆ ನಿಧಾನಗೊಳ್ಳುತ್ತದೆ. ಇದರಿಂದ ಮರೆವು, ಒತ್ತಡಕ್ಕೆ ತುತ್ತಾಗುವಿಕೆ, ನೆನಪಿನ ಶಕ್ತಿ ಕುಗ್ಗುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ವೃದ್ಧಾಪ್ಯದಲ್ಲಿ ಈ ಸಮಸ್ಯೆಗಳು ಸಾಮಾನ್ಯ. ಕೆಲವರು ಇದನ್ನು “60ರಲ್ಲಿ ಅರುಳು ಮರುಳು” ಎಂದು ಕರೆಯುತ್ತಾರೆ.
ಇಂತಹ ಸಂದರ್ಭದಲ್ಲಿ ವೈದ್ಯರ ಸಲಹೆಯೊಂದಿಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ, ಯೋಗಾಭ್ಯಾಸ, ಧ್ಯಾನ, ಸಾಮಾಜಿಕ ಸಂಪರ್ಕ, ಆಟ–ಪಾಟಗಳಲ್ಲಿ ತೊಡಗಿಸಿಕೊಳ್ಳುವುದು ಮೆದುಳನ್ನು ಚುರುಕುಗೊಳಿಸುವ ಪ್ರಮುಖ ಮಾರ್ಗ. ವಿಜ್ಞಾನಿಗಳು ಸ್ಪಷ್ಟಪಡಿಸಿರುವಂತೆ, ನಿರಂತರ ಕಲಿಕೆಯ ಮನೋಭಾವ ಮತ್ತು ನಿಯಮಿತ ವ್ಯಾಯಾಮವು ಮೆದುಳಿನ ಕಾರ್ಯಕ್ಷಮತೆಯನ್ನು ಕಾಪಾಡುತ್ತದೆ. ಮೆದುಳಿನ ಚಟುವಟಿಕೆ ನಿಂತರೆ ದೇಹದ ಬಲ ಎಷ್ಟೇ ಇದ್ದರೂ ಬದುಕಿನ ಗುಣಮಟ್ಟ ಕುಸಿಯುತ್ತದೆ. ಆದ್ದರಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಮೆದುಳಿನ ಆರೈಕೆಗೆ ಸಮರ್ಪಕವಾದ ಸಮಯ ಮೀಸಲಿಡಬೇಕು.
ಮೆದುಳನ್ನು ಕ್ರಿಯಾಶೀಲವಾಗಿಡುವ ಮಾರ್ಗಗಳು
ಹೊಸದನ್ನು ಕಲಿಯುವುದು – ಭಾಷೆಗಳು, ಸಂಗೀತ, ಸಾಹಿತ್ಯ, ಹೊಸ ಹವ್ಯಾಸಗಳನ್ನು ಅಳವಡಿಸಿಕೊಂಡರೆ ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ.
ಧ್ಯಾನ ಮತ್ತು ಯೋಗ – ಒತ್ತಡ, ಖಿನ್ನತೆ ಕಡಿಮೆ ಮಾಡಿ, ಸ್ಮರಣಶಕ್ತಿಯನ್ನು ವೃದ್ಧಿಸುತ್ತದೆ.
ವ್ಯಾಯಾಮ ಮತ್ತು ವಾಕ್ – ಪ್ರತಿದಿನ ಬೆಳಗ್ಗೆ–ಸಂಜೆ ನಡೆದರೆ ಮೆದುಳಿಗೆ ರಕ್ತ ಪ್ರವಾಹ ಹೆಚ್ಚಿ ಚುರುಕು ಬರುತ್ತದೆ.
ಆಟಗಳು – ಚೆಸ್, ಕೇರಂ, ಟೇಬಲ್ ಟೆನ್ನಿಸ್ ಅಥವಾ ಖೋಖೋ ಆಟಗಳು ಮೆದುಳಿಗೆ ಉತ್ತಮ ವ್ಯಾಯಾಮ.
ನಗು ಮತ್ತು ಸಾಮಾಜಿಕ ಸಂಪರ್ಕ – ನಿತ್ಯ ಸ್ನೇಹಿತರೊಂದಿಗೆ ನಗುವಿಕೆ, ಮಾತುಕತೆಗಳು ಮೆದುಳನ್ನು ತಾಜಾ ಇಡುತ್ತವೆ.
ನೆನಪಿನ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ:
ಪ್ರತಿದಿನ ಹಾಲಿಗೆ 2 ಚಮಚ ಜೇನುತುಪ್ಪ ಸೇರಿಸಿ ಸೇವಿಸುವುದು.
ತುಳಸಿ ಮತ್ತು ಜೀರಿಗೆ ಕಷಾಯ ಸೇವನೆ.
ಮಲಗುವಾಗ ದಿಂಬು ಚಿಕ್ಕದಾಗಿರಬೇಕು, ಹೆಚ್ಚು ಒತ್ತಡದಿಂದ ದೂರವಿರಬೇಕು.
ಹಾಲಿಗೆ ತುಪ್ಪ ಮತ್ತು ಜೇನು ಸೇರಿಸಿ ಕುಡಿಯುವುದರಿಂದ ಮೆದುಳಿಗೆ ಪೋಷಕಾಂಶ.
ನಿಯಮಿತ ವ್ಯಾಯಾಮದಿಂದ ರಕ್ತ ಸಂಚಾರ ಸುಧಾರಣೆ.