ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಚಿತ್ರ ದಿನವನ್ನು ಆಚರಿಸಲಾಗುತ್ತದೆ. ಫೋಟೋಗ್ರಫಿ ಎಂಬುದು ಕೇವಲ ಕಲೆಯಲ್ಲ, ಅದು ಜೀವನದ ನೆನಪುಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಒಂದು ಮಾಧ್ಯಮ. ತಂತ್ರಜ್ಞಾನ ಬೆಳವಣಿಗೆಗಳಿಂದ ಇಂದಿನ ಫೋಟೋಗ್ರಫಿ ಹೆಚ್ಚಿನ ಸುಧಾರಣೆ ಕಂಡಿದ್ದು, ಪ್ರತಿಯೊಬ್ಬರ ಕೈಯಲ್ಲಿರುವ ಮೊಬೈಲ್ ಫೋನ್ ಸಹ ಸೃಜನಾತ್ಮಕತೆಗೆ ಹೊಸ ದಾರಿ ತೋರಿಸಿದೆ.
1839 ರ ಸಮಯದಲ್ಲಿ ಛಾಯಾಗ್ರಹಣ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಇದನ್ನು ಡಾಗ್ರೋಟೈಪ್ ಎಂದು ಕರೆಯಲಾಗುತ್ತಿತ್ತು. ಇದನ್ನು ಫ್ರಾನ್ಸ್ನ ಜೋಸೆಫ್ ನೈಸ್ ಫೋರ್ ಮತ್ತು ಲೂಯಿಸ್ ಡಾಗೆರೆ ಕಂಡುಹಿಡಿದರು. ಇದಾದ ನಂತರ ಆಗಸ್ಟ್ 19, 1839 ರಲ್ಲಿ ಫ್ರೆಂಚ್ ಸರ್ಕಾರವು ಛಾಯಾಗ್ರಹಣದ ಈ ಆವಿಷ್ಕಾರವನ್ನು ಘೋಷಿಸಿ ಅದರ ಪೇಟೆಂಟ್ ಪಡೆದುಕೊಂಡಿತು. ಇದರ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. 2010ರಲ್ಲಿ ಮೊದಲ ಬಾರಿಗೆ 100ಕ್ಕೂ ಹೆಚ್ಚು ದೇಶಗಳಲ್ಲಿ ಆನ್ಲೈನ್ ಗ್ಯಾಲರಿ ಮೂಲಕ ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲಾಯಿತು. ಇದರಿಂದ ಫೋಟೋಗ್ರಫಿಯ ಪ್ರಭಾವವನ್ನು ಜಗತ್ತಿಗೆ ಪರಿಚಯಿಸಲಾಯಿತು.
ಇಂದು ಫೋಟೋ ತೆಗೆಯುವುದು ಕೇವಲ ನೆನಪುಗಳನ್ನು ಉಳಿಸುವುದಲ್ಲದೆ, ಸಮಾಜದ ವಾಸ್ತವ ಚಿತ್ರಣವನ್ನು ತೋರಿಸುವ ಶಕ್ತಿ ಹೊಂದಿದೆ. ಪತ್ರಿಕೋದ್ಯಮ, ಸಿನಿಮಾ, ವಿಜ್ಞಾನ, ಪ್ರವಾಸೋದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಛಾಯಾಚಿತ್ರವು ಪ್ರಮುಖ ಪಾತ್ರವಹಿಸಿದೆ. ಒಂದು ಚಿತ್ರವೇ ಸಾವಿರ ಪದಗಳಿಗೆ ಸಮಾನವೆಂಬ ಮಾತು ಇದರಿಂದಲೇ ಪ್ರಸಿದ್ಧಿಯಾಗಿದೆ.
ಇಂದು ಫೋಟೋಗ್ರಫಿ ಕೇವಲ ಉದ್ಯಮವಲ್ಲ, ಅದು ಕಲೆ, ಹವ್ಯಾಸ, ಪ್ರತಿಭೆ ಹಾಗೂ ಭಾವನೆಗಳ ಸಂಕಲನವಾಗಿದೆ. ಹಿಂದೆ ಕ್ಯಾಮರಾ ಹೊಂದಿದ್ದವರಿಗೆ ಮಾತ್ರ ಸೀಮಿತವಾಗಿದ್ದ ಈ ಕಲೆ, ಈಗ ಎಲ್ಲರ ಕೈಯಲ್ಲಿರುವ ಸ್ಮಾರ್ಟ್ಫೋನ್ಗಳಿಂದ ಸಾಮಾನ್ಯ ಜನರಿಗೂ ತಲುಪಿದೆ.
ವಿಶ್ವ ಛಾಯಾಗ್ರಹಣ ದಿನವು ಫೋಟೋಗ್ರಫಿಯ ಸೌಂದರ್ಯ, ತಂತ್ರಜ್ಞಾನ ಮತ್ತು ಕಲಾತ್ಮಕತೆಯ ಸಂಭ್ರಮ. ಇದು ಛಾಯಾಗ್ರಾಹಕರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ದಿನ. ಕ್ಷಣಗಳನ್ನು ಶಾಶ್ವತಗೊಳಿಸಿ, ಭಾವನೆಗಳಿಗೆ ಜೀವ ತುಂಬುವ ಈ ಕಲೆ ಮಾನವಜೀವನದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ.