ಸಮುದ್ರದ ಆಳದಲ್ಲಿ ಅಡಗಿರುವ ಅನೇಕ ಜೀವಿಗಳು ಮಾನವ ಆರೋಗ್ಯಕ್ಕೆ ಅಮೂಲ್ಯವಾದ ಔಷಧೀಯ ಗುಣಗಳನ್ನು ಹೊಂದಿವೆ. ಅವುಗಳಲ್ಲಿ ಪ್ರಮುಖವಾದುದು ಸಮುದ್ರಸೌತೆ. ಇದು ಸಮುದ್ರದ ಆಳದಲ್ಲಿ ಕಂಡುಬರುವ ಮೃದು ದೇಹದ ಜಲಚರ. ಇದು ನೋಡಲು ಸೌತೆಕಾಯಿಯಂತೆ ಇರುವುದರಿಂದ ಇದಕ್ಕೆ “Sea Cucumber” ಎಂದು ಹೆಸರು ಬಂದಿದೆ.
ಸಾಮಾನ್ಯ ಜನರಿಗೆ ಹೆಚ್ಚು ಪರಿಚಯವಿಲ್ಲದ ಈ ಜಲಚರ ಜೀವಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟಿ ಕೋಟಿ ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ, ಭಾರತದಲ್ಲಿ ಇವುಗಳನ್ನು ಹಿಡಿಯುವುದು ಮತ್ತು ಮಾರಾಟ ಮಾಡುವುದು ಕಾನೂನುಬಾಹಿರ. ಆದರೂ, ವಿದೇಶಗಳಲ್ಲಿ ಹೆಚ್ಚಾದ ಬೇಡಿಕೆಯ ಕಾರಣದಿಂದ ಕಳ್ಳಸಾಗಣೆ ನಡೆಯುತ್ತಲೇ ಇದೆ.
ಸಮುದ್ರಸೌತೆ ಸಾಮಾನ್ಯವಾಗಿ ಎಲ್ಲೆಡೆ ದೊರೆಯುವುದಿಲ್ಲ. ಇವು ತಮಿಳುನಾಡು ಕರಾವಳಿ ಮತ್ತು ಅಂಡಮಾನ್–ನಿಕೋಬಾರ್ ದ್ವೀಪಗಳ ಸಮುದ್ರದ ಆಳಗಳಲ್ಲಿ ಮಾತ್ರ ಕಂಡುಬರುತ್ತವೆ. ಇವು ಮೃದುವಾಗಿದ್ದು, ಸಿಲಿಂಡರ್ ಆಕಾರ ಹೊಂದಿರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದೆರಡು ಸಿಕ್ಕರೂ ಲಕ್ಷಾಂತರ ರೂಪಾಯಿ ಮೌಲ್ಯ ತಲುಪುತ್ತವೆ.
ಜಲಚರ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಲು ಸಮುದ್ರಸೌತೆ ಮಹತ್ವದ ಪಾತ್ರ ವಹಿಸುತ್ತವೆ. ಸಮುದ್ರದ ತಳಭಾಗವನ್ನು ಶುದ್ಧವಾಗಿಡುವಲ್ಲಿ ಸಹಕಾರಿ. ಇದರಿಂದಾಗಿ ಪರಿಸರ ವಿಜ್ಞಾನಿಗಳು ಇವುಗಳ ಅಸ್ತಿತ್ವವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಿದ್ದಾರೆ.
ಸಮುದ್ರಸೌತೆಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇರುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸಂಧಿವಾತ, ಹೃದಯ ಸಮಸ್ಯೆ ಮತ್ತು ಅನೇಕ ರೋಗಗಳಿಗೆ ಉಪಯುಕ್ತವೆಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಇವುಗಳ ಚರ್ಮದಲ್ಲಿರುವ ಫ್ಯೂಕೋಸಿಲೇಟೆಡ್ ಗ್ಲೈಕೋಸಾಮಿನೋಗ್ಲೈಕನ್ ಎಂಬ ರಾಸಾಯನಿಕವನ್ನು ಕೀಲು ನೋವು ಹಾಗೂ ಇತರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಯುರೋಪ್ ದೇಶಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೂ ಉಪಯೋಗಿಸುತ್ತಾರೆ.
ಕಾನೂನು ನಿಯಂತ್ರಣ
ಭಾರತದಲ್ಲಿ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಮುದ್ರಸೌತೆಗಳನ್ನು ಹಿಡಿಯುವುದು, ಮಾರಾಟ ಮಾಡುವುದು ಹಾಗೂ ರಫ್ತು ಮಾಡುವುದು ನಿಷಿದ್ಧ. ಆದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರುವ ಭಾರೀ ಬೇಡಿಕೆ ಕಾರಣದಿಂದ ಕಳ್ಳಸಾಗಣೆ ಹೆಚ್ಚುತ್ತಿದೆ. ವಿಶೇಷವಾಗಿ ಚೀನಾ ಹಾಗೂ ದಕ್ಷಿಣ ಏಷ್ಯಾದಲ್ಲಿ ಇವುಗಳನ್ನು ಹೆಚ್ಚು ಬಳಸಲಾಗುತ್ತದೆ.
ಸಮುದ್ರಸೌತೆ ಕೇವಲ ಹಣಕ್ಕಾಗಿ ಮಾತ್ರವಲ್ಲ, ಸಮುದ್ರ ಪರಿಸರ ಮತ್ತು ಮಾನವ ಆರೋಗ್ಯಕ್ಕಾಗಿ ಅಮೂಲ್ಯವಾದ ಜೀವಿ. ಆದರೆ ಕಾನೂನು ಉಲ್ಲಂಘನೆ ಮತ್ತು ಕಳ್ಳಸಾಗಣೆಯಿಂದ ಇವು ಅಳಿವಿನಂಚಿಗೆ ತಲುಪುತ್ತಿವೆ. ಭವಿಷ್ಯದಲ್ಲಿ ಇವು ಉಳಿಯಬೇಕೆಂದರೆ ಕಾನೂನು ಪಾಲನೆ ಹಾಗೂ ಪರಿಸರ ಸಂರಕ್ಷಣೆ ಎರಡೂ ಸಮಾನವಾಗಿ ನಡೆಯಬೇಕು.