ಉಷ್ಣವಲಯದಲ್ಲಿ ಬೆಳೆದು ತನ್ನ ಆಕರ್ಷಕ ವಿನ್ಯಾಸ ಮತ್ತು ಸಿಹಿ ರುಚಿಯಿಂದ ಜನಮನ ಸೆಳೆಯುತ್ತಿರುವ ಡ್ರ್ಯಾಗನ್ ಫ್ರೂಟ್ ಆರೋಗ್ಯಕರ ಹಣ್ಣಾಗಿ ಹೆಸರು ಮಾಡಿದೆ. ವಿಟಮಿನ್‌ಗಳು, ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‌ಗಳ ಸಮೃದ್ಧ ಮೂಲವಾದರೂ, ಇದನ್ನು ಹೆಚ್ಚು ಸೇವಿಸುವುದರಿಂದ ಕೆಲವು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯಕ್ಕೆ ಲಾಭ ನೀಡುವ ಈ ಹಣ್ಣು, ಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಸುರಕ್ಷಿತ.
ಜೀರ್ಣಕ್ರಿಯೆ ಸಮಸ್ಯೆಗಳು
ಡ್ರ್ಯಾಗನ್ ಫ್ರೂಟ್ ಫೈಬರ್‌ಗಳಲ್ಲಿ ಸಮೃದ್ಧವಾಗಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ, ಹೊಟ್ಟೆ ಉಬ್ಬುವುದು, ಅಜೀರ್ಣ, ಅತಿಸಾರ, ಗ್ಯಾಸ್ಟ್ರಿಕ್ ಮತ್ತು ಎದೆಯುರಿಯಂತಹ ಸಮಸ್ಯೆಗಳು ಕಾಣಿಸಬಹುದು. ವಿಶೇಷವಾಗಿ ಐಬಿಎಸ್ ಅಥವಾ ಅಲ್ಸರೇಟಿವ್ ಕೊಲೈಟಿಸ್ ಇರುವವರು ಮಿತ ಸೇವನೆ ಮಾಡುವುದು ಅಗತ್ಯ.
ರಕ್ತದೊತ್ತಡದಲ್ಲಿ ಬದಲಾವಣೆ
ಡ್ರ್ಯಾಗನ್ ಫ್ರೂಟ್ ಹೈಬ್ಲಡ್ ಪ್ರೆಶರ್ ಇರುವವರಿಗೆ ಸಹಾಯಕ. ಆದರೆ ಕಡಿಮೆ ರಕ್ತದೊತ್ತಡ ಹೊಂದಿರುವವರು ಹೆಚ್ಚು ಸೇವಿಸಿದರೆ, ತಲೆತಿರುಗುವುದು, ದೌರ್ಬಲ್ಯ ಹಾಗೂ ಆಯಾಸ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಮುಖ್ಯ.
ಸಕ್ಕರೆ ಮಟ್ಟದಲ್ಲಿ ಏರುಪೇರು
ಸ್ವಾಭಾವಿಕವಾಗಿ ಸಿಹಿಯಾದ ಈ ಹಣ್ಣು, ಮಧುಮೇಹಿಗಳಿಗೆ ಅಪಾಯಕಾರಿಯಾಗಬಹುದು. ಹೆಚ್ಚು ಸೇವಿಸಿದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏಕಾಏಕಿ ಏರಿಳಿಯುವ ಸಾಧ್ಯತೆ ಇದೆ. ಆದ್ದರಿಂದ ಮಧುಮೇಹಿಗಳು ಮಿತ ಸೇವನೆ ಮಾಡುವುದು ಸೂಕ್ತ.
ಅಲರ್ಜಿಗಳು ಮತ್ತು ತೂಕದ ಸಮಸ್ಯೆ
ಅತ್ಯಂತ ವಿರಳವಾದರೂ, ಕೆಲವರಿಗೆ ಡ್ರ್ಯಾಗನ್ ಫ್ರೂಟ್ ತಿಂದ ನಂತರ ಅಲರ್ಜಿಗಳು, ನಾಲಿಗೆ ಊತ, ಚರ್ಮದ ದದ್ದುಗಳು ಅಥವಾ ವಾಂತಿ ಉಂಟಾಗಬಹುದು. ಹಾಗೆಯೇ ಅತಿಯಾಗಿ ತಿಂದರೆ ಹೆಚ್ಚುವರಿ ಕ್ಯಾಲೊರಿಯಿಂದ ತೂಕ ಹೆಚ್ಚಾಗುವ ಅಪಾಯ ಇದೆ.
ಡ್ರ್ಯಾಗನ್ ಫ್ರೂಟ್ ಆರೋಗ್ಯಕ್ಕೆ ಒಳ್ಳೆಯ ಹಣ್ಣಾದರೂ, ಮಿತ ಪ್ರಮಾಣದಲ್ಲಿ ಸೇವಿಸಿದಾಗ ಮಾತ್ರ ಪ್ರಯೋಜನಕಾರಿ. ವಿಶೇಷವಾಗಿ ಮಧುಮೇಹ, ಕಡಿಮೆ ರಕ್ತದೊತ್ತಡ ಅಥವಾ ಜೀರ್ಣಕ್ರಿಯೆ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಸೇವನೆ ಮಾಡುವುದು ಸೂಕ್ತ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)