ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಏಷ್ಯಾಕಪ್ ಟೂರ್ನಿಗೆ ಬಿಸಿಬಿ ಆಯ್ಕೆ ಸಮಿತಿ ಭಾರತ ತಂಡವನ್ನು ಅಧಿಕೃತವಾಗಿ ಪ್ರಕಟಿಸಿದೆ. 15 ಸದಸ್ಯರ ಈ ತಂಡದಲ್ಲಿ ಅನುಭವಿಗಳ ಜೊತೆಗೆ ಯುವ ತಾರೆಗಳಿಗೂ ಸ್ಥಾನ ಸಿಕ್ಕಿದೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವ ಜವಾಬ್ದಾರಿ ಕೋಚ್ ಹಾಗೂ ನಿರ್ವಹಣಾ ತಂಡದ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಏಕೆಂದರೆ ತಂಡದಲ್ಲಿ ಮೂವರು ಆರಂಭಿಕ ದಾಂಡಿಗರು ಹಾಗೂ ನಾಲ್ವರು ಆಲ್ರೌಂಡರ್ಗಳಿರುವ ಕಾರಣ, ಯಾರಿಗೆ ಅವಕಾಶ ನೀಡಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬುದು ತಲೆಕೆಡಿಸಿಕೊಳ್ಳುವ ವಿಚಾರ.
ಮಾಹಿತಿಯ ಪ್ರಕಾರ, ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿಯುವ ಸಾಧ್ಯತೆ ಖಚಿತವಾಗಿದೆ. ಜೊತೆಗೆ ಗಿಲ್ ಉಪನಾಯಕನಾಗಿ ತಂಡದಲ್ಲಿ ಇರುವುದರಿಂದ ಈ ಇಬ್ಬರು ಮುಂದಾಳತ್ವ ವಹಿಸಲಿದ್ದಾರೆ. ಇದರೊಂದಿಗೆ ಸಂಜು ಸ್ಯಾಮ್ಸನ್ ಆರಂಭಿಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದು, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅಡಿಗಾಲಿಟ್ಟಿದ್ದಾರೆ. ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಏಳನೇ ಕ್ರಮಾಂಕದಲ್ಲಿ ಶಿವಂ ದುಬೆ ಹಾಗೂ ಎಂಟನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ತಂಡದ ಸಮತೋಲನ ಕಾಯ್ದುಕೊಳ್ಳಲಿದ್ದಾರೆ. ಯುಎಇ ಪಿಚ್ಗಳು ಸ್ಪಿನ್ನರ್ಗಳಿಗೆ ಅನುಕೂಲಕರವಾಗಿರುವುದರಿಂದ ಅಕ್ಷರ್ ಪಟೇಲ್ ಸ್ಪಿನ್ ಆಲ್ರೌಂಡರ್ ಆಗಿ ಪ್ರಮುಖ ಪಾತ್ರ ವಹಿಸುವರು.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ತಂಡಕ್ಕೆ ಬಲ ನೀಡಲಿದ್ದಾರೆ. ಆಲ್ರೌಂಡರ್ಗಳಾಗಿ ಪಾಂಡ್ಯ, ದುಬೆ ಹಾಗೂ ಪಟೇಲ್ ಇದ್ದು, ಇವರೊಂದಿಗೆ ಅಭಿಷೇಕ್ ಶರ್ಮಾ ಹೆಚ್ಚುವರಿ ಬೌಲಿಂಗ್ ಆಯ್ಕೆಯಾಗಿ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಟೀಮ್ ಇಂಡಿಯಾ ಕನಿಷ್ಠ ಎಂಟು ಬ್ಯಾಟರ್ಗಳನ್ನೊಳಗೊಂಡ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ.
ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಅಭಿಷೇಕ್ ಶರ್ಮಾ, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.