ಹಲ್ಲುಗಳು ಮನುಷ್ಯನ ಜೀವನದಲ್ಲಿ ಅತಿ ಮುಖ್ಯವಾದ ಪಾತ್ರ ವಹಿಸುತ್ತವೆ. ಸುಂದರ ನಗುವನ್ನು ನೀಡುವುದರಿಂದ ಹಿಡಿದು ಆಹಾರ ಸೇವನೆ ಮಾಡುವವರೆಗೂ ಹಲ್ಲುಗಳೇ ಆಧಾರ. ಮಗುವಾಗಿದ್ದಾಗ ಹಲ್ಲು ಮೂಡುವುದು ಹೇಗೆ ಸಾಮಾನ್ಯವೋ, ವಯಸ್ಸಾದಾಗ ಹಲ್ಲು ಉದುರುವುದು ಅಷ್ಟೇ ಸಾಮಾನ್ಯ. ಆದರೆ ಯೌವನದಲ್ಲಿಯೇ ಸರಿಯಾದ ಆರೈಕೆ ಮಾಡಿದರೆ ವೃದ್ಧಾಪ್ಯದಲ್ಲಿಯೂ ಹಲ್ಲುಗಳನ್ನು ಬಲವಾಗಿ ಕಾಪಾಡಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಹಲ್ಲು ಕಪ್ಪಾಗುವುದು, ಹುಳು ತಿನ್ನುವುದು, ಉದುರುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ ಆಹಾರ ಪದ್ಧತಿ ಮತ್ತು ಸರಿಯಾದ ದೈನಂದಿನ ಸ್ವಚ್ಚತೆಯ ಕೊರತೆ. ಬೇಕರಿ ತಿನಿಸು, ಸಕ್ಕರೆ ಹೆಚ್ಚಿರುವ ತಿಂಡಿಗಳು ಹಾಗೂ ಸರಿಯಾಗಿ ಬಾಯಿ ತೊಳೆಯುವ ಅಭ್ಯಾಸ ಇಲ್ಲದಿರುವುದು ಹಲ್ಲುಗಳಿಗೆ ಹಾನಿ ಮಾಡುತ್ತವೆ.
ಹಲ್ಲುಗಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸರಳ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ಹಲ್ಲಿನ ಸ್ವಚ್ಚತೆ ಕಾಪಾಡಬಹುದು. ಹಣ್ಣುಗಳನ್ನು ನೈಸರ್ಗಿಕ ಸ್ಥಿತಿಯಲ್ಲೇ ತಿನ್ನುವುದು ಉತ್ತಮ. ಜ್ಯೂಸ್ ಮಾಡಿ ಕುಡಿದರೆ ಹಣ್ಣಿನಲ್ಲಿರುವ ಸಕ್ಕರೆಯ ಅಂಶ ಹಲ್ಲುಗಳಿಗೆ ಹಾನಿ ಮಾಡುತ್ತದೆ. ಹಲ್ಲಿನ ನಡುವೆ ಆಹಾರ ಸಿಕ್ಕಿಕೊಂಡರೆ ಸೂಜಿ, ಪಿನ್ನು ಬಳಸದೇ ಡೆಂಟಲ್ ಫ್ಲಾಸ್ ಬಳಸಿ ತೆಗೆಯಬೇಕು. ತಂಪಾದ ಆಹಾರ ಹೆಚ್ಚು ಸೇವಿಸಿದರೆ ಹಲ್ಲಿನ ಸಂವೇದನೆ ಹೆಚ್ಚುತ್ತದೆ, ಹೀಗಾಗಿ ಅದನ್ನು ತಪ್ಪಿಸುವುದು ಒಳ್ಳೆಯದು.
ಟೀ, ಕಾಫಿ ಹೆಚ್ಚು ಸೇವನೆ ಮಾಡಿದರೆ ಹಲ್ಲುಗಳು ಹಳದಿಯಾಗಿ ಕಾಣುತ್ತವೆ. ಹೀಗಾಗಿ ದಿನಕ್ಕೆ ಎರಡು ಬಾರಿ ಮೀರಿಸದೆ ಸೇವಿಸಬೇಕು. ವಿಟಮಿನ್ ಸಿ ಇರುವ ಹಣ್ಣು, ತರಕಾರಿಗಳು ಹಲ್ಲುಗಳಿಗೆ ಶಕ್ತಿಯನ್ನು ನೀಡುತ್ತವೆ. ಹಲ್ಲುಜ್ಜುವಾಗ ನಿಧಾನವಾಗಿ ಜ್ಜಬೇಕು, ಅತಿಯಾದ ವೇಗದಲ್ಲಿ ಹಲ್ಲುಜ್ಜಿದರೆ ಹಲ್ಲಿನ ಮೇಲಿನ ಪದರಕ್ಕೆ ಹಾನಿಯಾಗಬಹುದು.
ಉಗುರು ಕಚ್ಚುವ ಅಭ್ಯಾಸವಿದ್ದರೆ ತಕ್ಷಣ ಬಿಟ್ಟುಬಿಡಬೇಕು, ಏಕೆಂದರೆ ಅಲ್ಲಿ ಇರುವ ಬ್ಯಾಕ್ಟೀರಿಯಾ ನೇರವಾಗಿ ಬಾಯಿಗೆ ಸೇರಿ ಹಲ್ಲು ಹಾಳಾಗಲು ಕಾರಣವಾಗಬಹುದು. ಹೆಚ್ಚಾಗಿ ನೀರು ಕುಡಿಯುವುದೂ ಬಹಳ ಮುಖ್ಯ, ಏಕೆಂದರೆ ಅದು ಬಾಯಿ ಮತ್ತು ಹಲ್ಲಿನೊಳಗಿನ ಆಹಾರ ಅವಶೇಷಗಳನ್ನು ತೊಳೆದು ಸ್ವಚ್ಚಗೊಳಿಸುತ್ತದೆ.
ಹಲ್ಲುಗಳು ಜೀವನದ ಸೌಂದರ್ಯಕ್ಕೂ ಆರೋಗ್ಯಕ್ಕೂ ಸಮಾನವಾಗಿ ಮುಖ್ಯ. ಕೇವಲ ವಯಸ್ಸಾಗುವವರೆಗೆ ಕಾಯುವುದಕ್ಕಿಂತ, ಯುವ ವಯಸ್ಸಿನಲ್ಲೇ ಹಲ್ಲಿನ ಆರೋಗ್ಯದ ಕಡೆ ಗಮನ ಹರಿಸಿದರೆ ಅವುಗಳನ್ನು ದೀರ್ಘಕಾಲ ಬಲಿಷ್ಠವಾಗಿ ಕಾಪಾಡಿಕೊಳ್ಳಬಹುದು. ಸರಿಯಾದ ಆಹಾರ ಪದ್ಧತಿ, ನಿಯಮಿತ ಸ್ವಚ್ಚತೆ ಮತ್ತು ಉತ್ತಮ ಅಭ್ಯಾಸಗಳಿಂದ ಸುಂದರ ನಗುವಿನ ಜೊತೆಗೆ ಆರೋಗ್ಯಕರ ಹಲ್ಲುಗಳನ್ನು ಹೊಂದುವುದು ಸಾಧ್ಯ.