ಇತ್ತೀಚಿನ ದಿನಗಳಲ್ಲಿ ಅನೇಕರು ನಾನ್ ವೆಜ್ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಾರೆ. ಮೀನಿನ ರುಚಿ, ಚಿಕನ್ನ ಸುವಾಸನೆ, ಮೊಟ್ಟೆಯ ಸವಿರುಚಿ ಎಲ್ಲವೂ ಡೈನಿಂಗ್ ಟೇಬಲ್ ಅನ್ನು ವಿಶೇಷವಾಗಿಸುತ್ತವೆ. ಆದರೆ, ನಾನ್ ವೆಜ್ ಅಡುಗೆ ಮಾಡಿದ ನಂತರ ಬರುವ ಸಮಸ್ಯೆ ಎಂದರೆ ಅಡುಗೆಯ ನಂತರ ಪಾತ್ರೆಗಳಿಂದ ಬರೋ ಕೆಟ್ಟ ವಾಸನೆ. ಪಾತ್ರೆಗಳನ್ನು ಎಷ್ಟೇ ತೊಳೆದರೂ ಕೆಲವೊಮ್ಮೆ ಮೀನು, ಚಿಕನ್ ಅಥವಾ ಮೊಟ್ಟೆಯ ವಾಸನೆ ಉಳಿಯುತ್ತದೆ. ಅಡುಗೆ ಮನೆಯೊಳಗೆ ಈ ದುರ್ನಾತವು ತುಂಬಿಕೊಂಡರೆ ಅಸಹ್ಯವಾಗುವುದು ಸಹಜ. ಈ ವಾಸನೆಯನ್ನು ಹೋಗಲಾಡಿಸಲು ಅನೇಕರು ಬಲವಾದ ಸೋಪು, ಹೆಚ್ಚಿನ ನೀರು ಅಥವಾ ಕ್ಲೀನರ್ಗಳನ್ನು ಬಳಸುತ್ತಾರೆ. ಆದರೆ ಇವು ಯಾವಾಗಲೂ ಪರಿಣಾಮಕಾರಿ ಆಗುವುದಿಲ್ಲ.
ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಕೈಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಜೊತೆಗೆ, ಅಡುಗೆ ಮನೆಯ ಆರೋಗ್ಯಕರ ವಾತಾವರಣಕ್ಕೂ ಹಾನಿ ಆಗಬಹುದು. ಆದರೆ ಮನೆಯಲ್ಲೇ ಇರುವ ಕೆಲವು ಸರಳ ಸಾಮಗ್ರಿಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಿಂಬೆ, ಉಪ್ಪು, ಅಡುಗೆ ಸೋಡಾ, ವಿನೆಗರ್ ಹಾಗೂ ಕಾಫಿ ಪುಡಿ ಹೀಗೆ ದೈನಂದಿನ ಜೀವನದಲ್ಲಿ ಬಳಸುವ ಸಾಮಗ್ರಿಗಳು ಪಾತ್ರೆಗಳ ವಾಸನೆ ಹೋಗಲಾಡಿಸಲು ತುಂಬಾ ಪರಿಣಾಮಕಾರಿ. ಇವು ಪರಿಣಾಮಕಾರಿ ಮತ್ತು ರಾಸಾಯನಿಕ ಹಾನಿಯಿಲ್ಲದೇ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತವೆ.
ನಿಂಬೆ ರಸದ ಮಂತ್ರ
ನಿಂಬೆ ಆಹಾರದಲ್ಲಿ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ವಾಸನೆ ಹೋಗಲಾಡಿಸಲು ಸಹ ಸಹಕಾರಿ. ಪಾತ್ರೆಗೆ ಸ್ವಲ್ಪ ನಿಂಬೆ ರಸ ಹಚ್ಚಿ ಕೆಲವು ನಿಮಿಷಗಳ ನಂತರ ತೊಳೆದರೆ ಮೀನು ಮತ್ತು ಮೊಟ್ಟೆಯ ವಾಸನೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಉಪ್ಪಿನ ಶಕ್ತಿ
ಮೀನು ಅಥವಾ ಮೊಟ್ಟೆ ಬೇಯಿಸಿದ ಪಾತ್ರೆಗೆ ಸ್ವಲ್ಪ ಉಪ್ಪು ಹಚ್ಚಿ ಬೆಚ್ಚಗಿನ ನೀರಿನಿಂದ ತೊಳೆದರೆ, ಉಪ್ಪು ವಾಸನೆಯನ್ನು ಹೀರಿಕೊಂಡು ಪಾತ್ರೆ ತಾಜಾ ಆಗುತ್ತದೆ.
ಅಡುಗೆ ಸೋಡಾ ಬಳಕೆ
ಪಾತ್ರೆ ತೊಳೆಯುವ ನೀರಿಗೆ ಅಡುಗೆ ಸೋಡಾ ಸೇರಿಸಿ ಪಾತ್ರೆಗಳನ್ನು ಕೆಲ ಹೊತ್ತು ನೆನೆಸಿಟ್ಟು ನಂತರ ಸೋಪಿನಿಂದ ತೊಳೆದರೆ ಪಾತ್ರೆಗಳು ಹೊಳೆಯುವುದಲ್ಲದೆ ದುರ್ವಾಸನೆ ಹೋಗುತ್ತದೆ.
ವಿನೆಗರ್ ಉಪಯೋಗ
ವಿನೆಗರ್ ಪಾತ್ರೆಗಳಲ್ಲಿನ ನಾನ್ ವೆಜ್ ವಾಸನೆಯನ್ನು ತೆಗೆದುಹಾಕಲು ಉತ್ತಮ ಪರಿಹಾರ. ಸ್ವಲ್ಪ ವಿನೆಗರ್ ಹಾಕಿ ಹತ್ತು ನಿಮಿಷಗಳ ಕಾಲ ಪಾತ್ರೆ ನೆನೆಸಿಟ್ಟು ನಂತರ ತೊಳೆದರೆ ವಾಸನೆ ದೂರವಾಗುತ್ತದೆ.
ಕಾಫಿ ಪುಡಿಯ ಸುವಾಸನೆ
ಪಾತ್ರೆ ತೊಳೆಯುವ ನೀರಿಗೆ ಸ್ವಲ್ಪ ಕಾಫಿ ಪುಡಿ ಸೇರಿಸಿದರೆ, ಕಾಫಿಯ ಸುಗಂಧವು ನಾನ್ ವೆಜ್ ವಾಸನೆಯನ್ನು ಸಂಪೂರ್ಣ ಹೋಗಲಾಡಿಸುತ್ತದೆ.