ಮಲೇರಿಯಾ ಎಂಬುದು ಪ್ರಪಂಚದಾದ್ಯಂತ ಸಾವಿರಾರು ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ರೋಗವಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಈ ಕಾಯಿಲೆಯ ಪರಿಣಾಮ ಗಂಭೀರವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹಲವು ವರ್ಷಗಳಿಂದ ಮಲೇರಿಯಾ ನಿಯಂತ್ರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದ್ದರೂ, ಸಾಮಾನ್ಯ ಜನರಿಗೆ ಇನ್ನೂ ಇದರ ಸಂಪೂರ್ಣ ಅರಿವು ಇಲ್ಲ. ಇದರಿಂದಾಗಿ ರೋಗ ಹರಡುವಿಕೆ ತಡೆಗಟ್ಟುವಲ್ಲಿ ಅಡಚಣೆ ಉಂಟಾಗುತ್ತದೆ. ಮಲೇರಿಯಾ ಹರಡುವುದನ್ನು ತಡೆಯಲು ಸರಿಯಾದ ಮಾಹಿತಿ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪೋಷಕರ ಜವಾಬ್ದಾರಿ ಅಗತ್ಯವಾಗಿದೆ. ಮಕ್ಕಳ ಆರೋಗ್ಯವನ್ನು ಕಾಪಾಡಲು ಪೋಷಕರು ಸಮಯಕ್ಕೆ ತಕ್ಕ ನಿರ್ಧಾರ ತೆಗೆದುಕೊಳ್ಳುವುದು ಅತ್ಯಗತ್ಯ.
ಮಲೇರಿಯಾ ಹೇಗೆ ಹರಡುತ್ತದೆ?
ಮಲೇರಿಯಾ ಒಂದು ಸೊಳ್ಳೆಯಿಂದ ಹರಡುವ ರೋಗ. ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಎಂಬ ಪರಾವಲಂಬಿ ಸೊಳ್ಳೆಗಳ ಮೂಲಕ ಮಾನವನ ದೇಹಕ್ಕೆ ಪ್ರವೇಶಿಸಿ ಯಕೃತ್ತಿನಲ್ಲಿ ವೃದ್ಧಿಯಾಗುತ್ತದೆ. ಬಳಿಕ ಕೆಂಪು ರಕ್ತಕಣಗಳನ್ನು ಸೋಂಕುಮಾಡಿ ಜ್ವರ, ತಲೆನೋವು, ವಾಂತಿ, ವಾಕರಿಕೆ ಮತ್ತು ಕೆಲವೊಮ್ಮೆ ಭೇದಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತೀವ್ರ ಸ್ಥಿತಿಯಲ್ಲಿ ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು.
ಮಕ್ಕಳಲ್ಲಿ ಮಲೇರಿಯಾದ ಲಕ್ಷಣಗಳು
ಮಲೇರಿಯಾದ ಪ್ರಮುಖ ಲಕ್ಷಣವೆಂದರೆ ಜ್ವರ. ಜೊತೆಗೆ ಶೀತ, ತಲೆನೋವು, ವಾಕರಿಕೆ, ವಾಂತಿ ಮತ್ತು ದೇಹದಲ್ಲಿ ಆಯಾಸ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮಕ್ಕಳಲ್ಲಿ ಜ್ವರದ ಜೊತೆಗೆ ಶೀತವಿಲ್ಲದೇ ಇತರ ಅಸ್ವಸ್ಥತೆಯ ಲಕ್ಷಣಗಳು ಮಾತ್ರ ಕಂಡುಬರಬಹುದು.
ಪೋಷಕರು ಕೈಗೊಳ್ಳಬೇಕಾದ ಆರೈಕೆ
ಮಲೇರಿಯಾದಲ್ಲಿ ಮಗುವಿಗೆ ಪ್ಯಾರಾಸಿಟಮಾಲ್‌ನಂತಹ ಔಷಧಿಗಳನ್ನು ವೈದ್ಯರ ಸಲಹೆಯಂತೆ ನೀಡುವುದು, ಸಾಕಷ್ಟು ವಿಶ್ರಾಂತಿ ಒದಗಿಸುವುದು, ನೀರನ್ನು ಹೆಚ್ಚು ಕುಡಿಯುವಂತೆ ಮಾಡುವುದು ಮತ್ತು ಪೌಷ್ಟಿಕ ಆಹಾರ ನೀಡುವುದು ಮುಖ್ಯ. ಮಲೇರಿಯಾದ ಲಕ್ಷಣಗಳು ತೀವ್ರವಾದರೆ ತಕ್ಷಣವೇ ವೈದ್ಯಕೀಯ ನೆರವು ಪಡೆಯಬೇಕು.
ಮಲೇರಿಯಾ ತೀವ್ರವಾದಾಗ ಕಾಮಾಲೆ, ಮೂತ್ರ ಅಥವಾ ಮಲದಲ್ಲಿ ರಕ್ತ, ನಿರಂತರ ಜ್ವರದಂತಹ ಅಪಾಯಕಾರಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ರಕ್ಷಣಾ ಕ್ರಮಗಳು
ಮಕ್ಕಳನ್ನು ಸೊಳ್ಳೆ ಕಡಿತದಿಂದ ರಕ್ಷಿಸುವುದು ಮಲೇರಿಯಾ ತಡೆಗಟ್ಟುವ ಮುಖ್ಯ ಮಾರ್ಗ. ಸೊಳ್ಳೆ ನಿವಾರಕ, ಸೊಳ್ಳೆ ಬತ್ತಿ, ಸೊಳ್ಳೆ ಪರದೆಗಳನ್ನು ಬಳಸುವುದು, ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ಮಕ್ಕಳಿಗೆ ನೈರ್ಮಲ್ಯ ಅಭ್ಯಾಸ ಕಲಿಸುವುದು ಅಗತ್ಯ.