ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಅವರ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಹರಿ ಹರ ವೀರ ಮಲ್ಲು’ ಬಿಡುಗಡೆ ಆಗುವ ಮುನ್ನವೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟಿಸಿತ್ತು. ಜುಲೈ 24ರಂದು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಆರಂಭದಲ್ಲಿ ನಿರೀಕ್ಷಿತ ಮಟ್ಟದ ಸಂಭ್ರಮ ಸೃಷ್ಟಿಸಿದರೂ, ಪ್ರದರ್ಶನದ ಬಳಿಕ ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿತು. ಪ್ರೇಕ್ಷಕರ ಅಭಿಪ್ರಾಯಗಳು ವಿಭಿನ್ನವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಹ ಸಿನಿಮಾ ಸರಾಸರಿ ಮಟ್ಟದ ಕಲೆಕ್ಷನ್ ಮಾತ್ರ ಗಳಿಸಿತು. ವಿಕಿಪೀಡಿಯಾ ಮಾಹಿತಿಯ ಪ್ರಕಾರ, ಈ ಸಿನಿಮಾ ಸುಮಾರು 106 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲಿಸಿದೆ. ಇದೀಗ ಹೆಚ್ಚು ಸದ್ದಿಲ್ಲದೆ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಆಗಸ್ಟ್ 20ರಿಂದ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಾಗಿದ್ದು, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಬಹುದು. ಆದರೆ ಕನ್ನಡ ಮತ್ತು ಹಿಂದಿ ಭಾಷೆಯ ಆವೃತ್ತಿಗಳನ್ನು ಪ್ರಸ್ತುತ ಲಭ್ಯವಿಲ್ಲ. ವಿಶೇಷವೆಂದರೆ, ಸಿನಿಮಾ ಬಿಡುಗಡೆ ಆದ ಒಂದು ತಿಂಗಳಿಗೂ ಮುಂಚಿತವಾಗಿಯೇ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬಿಡುಗಡೆಯಾಗಿದೆ.
ಈ ಐತಿಹಾಸಿಕ ಸಿನಿಮಾ ಕೋಹಿನೂರ್ ವಜ್ರದ ಕಥೆಯನ್ನು ಆಧರಿಸಿ ಪ್ರಾರಂಭವಾಗುತ್ತದೆ. ನಂತರ ಮೊಘಲ್ ದೊರೆಗಳ ದೌರ್ಜನ್ಯ ಮತ್ತು ಆ ಕಾಲಘಟ್ಟದ ಹೋರಾಟಗಳನ್ನು ಚಿತ್ರವು ತೋರಿಸುತ್ತದೆ. ಪವನ್ ಕಲ್ಯಾಣ್ ಸ್ವತಃ ಈ ಸಿನಿಮಾವನ್ನು ಭಾರತದ ರಾಬಿನ್‌ಹುಡ್ ಕಥೆ ಎಂದು ಹೇಳಿದ್ದು, ಜನರ ಹಕ್ಕಿಗಾಗಿ ಹೋರಾಡುವ ನಾಯಕನ ಕಥೆಯಾಗಿ ಚಿತ್ರ ರೂಪುಗೊಂಡಿದೆ. ಇದೀಗ ಬಿಡುಗಡೆಯಾದ ಭಾಗವು ಸಿನಿಮಾದ ಮೊದಲ ಭಾಗ ಇದಾಗಿದ್ದು, ಮುಂದಿನ ಭಾಗವೂ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಚಿತ್ರವನ್ನು ಮೂಲತಃ ಕ್ರಿಶ್ ನಿರ್ದೇಶನ ಮಾಡಲಿದ್ದರೂ, ಪವನ್ ಕಲ್ಯಾಣ್ ಅವರ ರಾಜಕೀಯದಿಂದಾಗಿ ಅವರು ಮಧ್ಯದಲ್ಲೇ ಸಿನಿಮಾ ತಂಡದಿಂದ ದೂರ ಉಳಿದರು. ನಂತರ ನಿರ್ಮಾಪಕ ಎ.ಎಂ. ರತ್ನಂ ಅವರ ಪುತ್ರ ಎ.ಎಂ. ಜ್ಯೋತಿ ಕೃಷ್ಣ ಸಿನಿಮಾ ನಿರ್ದೇಶನ ಮಾಡಿ ಪೂರ್ಣಗೊಳಿಸಿದರು. ಈ ಹಿಂದೆ ಪವನ್ ಕಲ್ಯಾಣ್ ನಟನೆಯ ‘ಖುಷಿ’ ಮತ್ತು ‘ಬಂಗಾರಂ’ ಚಿತ್ರಗಳನ್ನು ನಿರ್ಮಿಸಿದ್ದ ಎ.ಎಂ. ರತ್ನಂ ಅವರೇ ಈ ಚಿತ್ರವನ್ನು ನಿರ್ಮಿಸಿದ್ದಾರೆ.