ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಐಸಿಸಿ ರ‍್ಯಾಂಕಿಂಗ್‌ನಿಂದ ಔಟ್! ಇದು ಸದ್ದಿಲ್ಲದ ವಿದಾಯವೇ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ಆಘಾತ ತಂದ ಸುದ್ದಿಯೇನು ಎಂದರೆ, ಏಕದಿನ ಕ್ರಿಕೆಟ್ ಬ್ಯಾಟ್ಸ್‌ಮನ್‌ಗಳ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರುಗಳು ಕಾಣೆಯಾಗಿದೆ. ಇತ್ತೀಚೆಗೆ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಈ ದಿಗ್ಗಜರು, ಕನಿಷ್ಠ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿಯುತ್ತಾರೆ ಎಂಬ ಭರವಸೆ ಅಭಿಮಾನಿಗಳಿಗೆ ಇತ್ತು. ಆದರೆ ಇದೀಗ ಬಂದಿರುವ ರ‍್ಯಾಂಕಿಂಗ್ ಬದಲಾವಣೆ ಅವರ ಭವಿಷ್ಯದ ಕುರಿತ ಚರ್ಚೆಗೆ ಹೊಸ ಬಣ್ಣ ಹಚ್ಚಿದೆ.

ಇತ್ತೀಚಿನವರೆಗೂ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ 2ನೇ ಹಾಗೂ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದರು. ಆದರೆ ಹೊಸದಾಗಿ ಪ್ರಕಟವಾದ ಪಟ್ಟಿಯಲ್ಲಿ ಇವರಿಬ್ಬರ ಹೆಸರು 100ರಲ್ಲಿಯೂ ಇಲ್ಲ. ಇದರಿಂದ “ಇಬ್ಬರೂ ಸದ್ದಿಲ್ಲದೆ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ, ಘೋಷಣೆ ಮಾತ್ರ ಬಾಕಿಯಿದೆ” ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.

ಕಳೆದ ವಾರದಷ್ಟರಲ್ಲೇ ಇಬ್ಬರು ಟಾಪ್ 10ರಲ್ಲಿ ಇದ್ದರು. ಬಾಬರ್ ಅಜಮ್ ಅವರ ಸಾಧಾರಣ ಪ್ರದರ್ಶನದಿಂದ ರೋಹಿತ್ ಹಾಗೂ ಕೊಹ್ಲಿ ಬಡ್ತಿ ಪಡೆದಿದ್ದರು. ಆದರೆ ಇತ್ತೀಚಿನ ಪಟ್ಟಿಯಲ್ಲಿ ಅವರ ಹೆಸರು ಕಾಣಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ಇದರಿಂದ ಬಿಸಿಸಿಐಗೆ ಇವರಿಬ್ಬರು ವಿದಾಯದ ನಿರ್ಧಾರವನ್ನು ತಿಳಿಸಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಆದರೂ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಸದ್ಯ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಶುಬಮನ್ ಗಿಲ್ ಮೊದಲ ಸ್ಥಾನದಲ್ಲಿದ್ದು, 6ನೇ ಸ್ಥಾನವನ್ನು ಶ್ರೇಯಸ್ ಅಯ್ಯರ್ ಪಡೆದಿದ್ದಾರೆ. ಇವರಿಬ್ಬರನ್ನು ಹೊರತುಪಡಿಸಿದರೆ ಟಾಪ್ 10ರಲ್ಲಿ ಭಾರತೀಯ ಆಟಗಾರರ ಹೆಸರು ಇಲ್ಲ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಏಕದಿನ ರ‍್ಯಾಂಕಿಂಗ್‌ನಿಂದ ಹೊರಗುಳಿದಿರುವುದು ಅಭಿಮಾನಿಗಳಲ್ಲಿ ಕುತೂಹಲ ಹಾಗೂ ಆತಂಕ ಮೂಡಿಸಿದೆ. ಕ್ರಿಕೆಟ್ ವಲಯದಲ್ಲಿ ಇವರ ಮುಂದಿನ ನಿರ್ಧಾರ ಏನು ಅನ್ನೋದರ ಕುರಿತ ಚರ್ಚೆ ಜೋರಾಗಿದೆ. ಬಿಸಿಸಿಐ ಅಥವಾ ಆಟಗಾರರಿಂದ ಅಧಿಕೃತ ಸ್ಪಷ್ಟನೆ ಬರುವ ತನಕ ಅಭಿಮಾನಿಗಳ ಕಾತರ ಮುಂದುವರಿಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!