ಚಳಿಗಾಲ ಅಥವಾ ಮಳೆಗಾಲದಲ್ಲಿ ಬಹುತೇಕರು ಬಿಸಿನೀರಿನಲ್ಲಿ ಸ್ನಾನ ಮಾಡುವುದನ್ನು ಇಷ್ಟಪಡುತ್ತಾರೆ. ಕೆಲವರು ಯಾವ ಋತುಮಾನವಾದರೂ ಕಡ್ಡಾಯವಾಗಿ ಉಗುರು ಬೆಚ್ಚಗಿನ ಅಥವಾ ಬಿಸಿನೀರಿನ ಸ್ನಾನವೇ ಮಾಡುತ್ತಾರೆ. ಆದರೆ ಪ್ರತಿದಿನ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ದೇಹ ಮತ್ತು ಚರ್ಮದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಆರೋಗ್ಯ ತಜ್ಞರು ವಿವರಿಸಿದ್ದಾರೆ.
ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ದೇಹದಲ್ಲಿ ರಕ್ತಪ್ರಸರಣ ಸುಧಾರಿಸುತ್ತದೆ. ಇಡೀ ದಿನದ ಒತ್ತಡ ಮತ್ತು ದಣಿವು ನಿವಾರಣೆಯಾಗಲು ಸಹಾಯ ಮಾಡುತ್ತದೆ. ತಜ್ಞರ ಪ್ರಕಾರ ಬಿಸಿನೀರಿನಲ್ಲಿ ತುಳಸಿ ಅಥವಾ ನೀಲಗಿರಿ ಎಣ್ಣೆ ಬೆರೆಸಿ ಸ್ನಾನ ಮಾಡಿದರೆ ಮನಸ್ಸು ಹಗುರವಾಗುತ್ತದೆ ಮತ್ತು ರಿಫ್ರೆಶ್ ಆಗಲು ಸಹಕಾರಿ.
ಇನ್ನು ನಿದ್ರಾಹೀನತೆಯಿಂದ ಬಳಲುವವರಿಗೆ ಬಿಸಿನೀರಿನ ಸ್ನಾನ ಉತ್ತಮ ಪರಿಹಾರ. ಮಲಗುವ ಒಂದು ಗಂಟೆ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ನರಮಂಡಲ ಶಾಂತಗೊಳ್ಳುತ್ತದೆ ಮತ್ತು ಸುಲಭವಾಗಿ ನಿದ್ರೆ ಬರುವುದಕ್ಕೆ ನೆರವಾಗುತ್ತದೆ ಎಂದು ಹಲವು ಅಧ್ಯಯನಗಳು ತೋರಿಸಿವೆ.
ಚರ್ಮದ ಆರೈಕೆಯ ದೃಷ್ಟಿಯಿಂದ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ಮೃದುವಾಗುತ್ತದೆ, ಊತ ಕಡಿಮೆ ಮಾಡುತ್ತದೆ. ಜೊತೆಗೆ ಕೆಮ್ಮು, ಶೀತ ಮತ್ತು ಮೂಗಿನ ಕಟ್ಟಿಕೊಳ್ಳುವಿಕೆ ಸಮಸ್ಯೆ ನಿವಾರಣೆಯಾಗಬಹುದು. ಆದರೆ ನೀರು ತುಂಬಾ ಬಿಸಿ ಆಗಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಉಗುರು ಬೆಚ್ಚಗಿನ ನೀರು ಜ್ವರ ಅಥವಾ ತಲೆನೋವಿಗೂ ಪರಿಹಾರ ನೀಡಬಹುದು.
ಆದರೆ ಬಿಸಿನೀರು ಯಾವಾಗಲೂ ಲಾಭಕರವಲ್ಲ. ನಿರಂತರ ಬಿಸಿನೀರಿನಲ್ಲಿ ಸ್ನಾನ ಮಾಡಿದರೆ ಕೂದಲಿನ ನೈಸರ್ಗಿಕ ಎಣ್ಣೆ ಕಡಿಮೆಯಾಗುತ್ತದೆ. ಇದರಿಂದ ಕೂದಲು ಒಣಗುವುದು, ಉದುರುವುದು ಮತ್ತು ತುರಿಕೆ ಸಮಸ್ಯೆ ಹೆಚ್ಚಾಗಬಹುದು. ಜೊತೆಗೆ ಚರ್ಮವು ಬೇಗನೆ ಸುಕ್ಕುಗಟ್ಟುವ ಅಪಾಯವೂ ಇದೆ.
ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿದ್ದರೂ ಅತಿಯಾದ ಬಿಸಿನೀರು ಬಳಸುವುದರಿಂದ ಹಾನಿಯೂ ಉಂಟಾಗಬಹುದು. ಆದ್ದರಿಂದ ತಜ್ಞರ ಸಲಹೆಯಂತೆ 104 ರಿಂದ 108 ಡಿಗ್ರಿ ಫ್ಯಾರನ್‌ಹೀಟ್ ನಡುವಿನ ತಾಪಮಾನದಲ್ಲಿರುವ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗಿದೆ.