ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ ಏಕದಿನ ಸರಣಿಯಲ್ಲಿ ಪೈಪೋಟಿ ನಡೆಸುತ್ತಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿ ಉತ್ತಮ ಆರಂಭ ಮಾಡಿದೆ. ಆದರೆ ಇದೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಯುವ ಬೌಲರ್ ಪ್ರೆನೆಲನ್ ಸುಬ್ರಿಯಾನ್ ಅವರ ಬೌಲಿಂಗ್ ಶೈಲಿ ಈಗ ವಿವಾದಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಸುಬ್ರಿಯಾನ್ ಶಿಸ್ತಿನ ಬೌಲಿಂಗ್ ಮೂಲಕ ಗಮನ ಸೆಳೆದರು. ಅವರು 10 ಓವರ್ ಬೌಲಿಂಗ್ ಮಾಡಿ ಟ್ರಾವಿಸ್ ಹೆಡ್ ಅವರ ಪ್ರಮುಖ ವಿಕೆಟ್ ಪಡೆದಿದ್ದರು. ಆದರೆ ಪಂದ್ಯದ ನಂತರ, ಅವರ ಆ್ಯಕ್ಷನ್ ಬಗ್ಗೆ ಅನುಮಾನ ವ್ಯಕ್ತವಾದ ಕಾರಣದಿಂದ ಪಂದ್ಯದ ಅಧಿಕಾರಿಗಳು ಈ ವಿಷಯವನ್ನು ಐಸಿಸಿಗೆ ವರದಿ ಮಾಡಿದ್ದಾರೆ.
ಐಸಿಸಿ ಪರೀಕ್ಷೆಗೆ ಒಳಗಾಗಬೇಕಾದ ಬೌಲರ್
ನಿಯಮ ಪ್ರಕಾರ, ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆ ಉದ್ಭವಿಸಿದರೆ ಸಂಬಂಧಿತ ಆಟಗಾರನು ಐಸಿಸಿ ಮಾನ್ಯತೆ ಪಡೆದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೊಳಗಾಗಬೇಕು. ಆದಾಗ್ಯೂ, ಫಲಿತಾಂಶ ಬರುವವರೆಗೆ ಸುಬ್ರಿಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬೌಲಿಂಗ್ ಮುಂದುವರಿಸಬಹುದಾಗಿದೆ.
ಈ ವರ್ಷದ ಆರಂಭದಲ್ಲಿ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸುಬ್ರಿಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪ್ರವೇಶಿಸಿದ್ದರು. ಆ ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್ ಪಡೆದು ಗಮನ ಸೆಳೆದಿದ್ದರು. ಈಗ ಏಕದಿನಕ್ಕೂ ಕಾಲಿಟ್ಟಿರುವ ಅವರು, ತಮ್ಮ ಬೌಲಿಂಗ್ ಮೇಲೆ ಮೂಡಿದ ಸಂಶಯದಿಂದಾಗಿ ಮತ್ತೊಮ್ಮೆ ಸವಾಲಿನ ಎದುರು ನಿಂತಿದ್ದಾರೆ.
ಸುಬ್ರಿಯಾನ್ ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಆಫ್ರಿಕಾ ಪರ ದೇಶೀಯ ಕ್ರಿಕೆಟ್ನಲ್ಲಿ ನಿರಂತರವಾಗಿ ಆಡುತ್ತಿದ್ದಾರೆ. ಅವರು ಇದುವರೆಗೆ 78 ಪ್ರಥಮ ದರ್ಜೆ, 102 ಲಿಸ್ಟ್ ಎ ಹಾಗೂ 120 ಟಿ20 ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಜೊತೆಗೆ ದಕ್ಷಿಣ ಆಫ್ರಿಕಾದ ಎಸ್ಎ20 ಟಿ20 ಲೀಗ್ನ ಭಾಗವಾಗಿಯೂ ಇದ್ದಾರೆ.