ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿರುವ ಈ ಚಿತ್ರ ಅಭಿಮಾನಿಗಳ ಮನಗೆದ್ದಿದೆ. ಆದರೆ, ಚಿತ್ರವು ವ್ಯಾಪಕ ಮಟ್ಟದಲ್ಲಿ ಕಲೆಕ್ಷನ್ ಸಾಧಿಸುತ್ತಿದ್ದರೂ ನಿರ್ಮಾಪಕರಿಗೆ ಒಂದು ಅಸಮಾಧಾನ ಕಾಡುತ್ತಿದೆ. ಕಾರಣ, ಸೆನ್ಸಾರ್ ಮಂಡಳಿ (CBFC) ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಿರುವುದು.
ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯಗಳು ಹೆಚ್ಚಾಗಿರುವ ಕಾರಣದಿಂದ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಅಂದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಚಿತ್ರವನ್ನು ವೀಕ್ಷಿಸಲು ಅವಕಾಶವಿಲ್ಲ. ನಿರ್ಮಾಪಕರು ಈ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೂ, ಮರುಪರಿಶೀಲನೆಯಲ್ಲಿಯೂ ‘ಎ’ ಪ್ರಮಾಣಪತ್ರವೇ ಬಂತು.
ಕುಟುಂಬ ಸಮೇತ ಸಿನಿಮಾ ನೋಡುವುದಕ್ಕೆ ಬರುವ ಪ್ರೇಕ್ಷಕರಿಗೆ ಈ ಪ್ರಮಾಣಪತ್ರ ಅಡ್ಡಿಯಾಗಿದೆ. ಮಕ್ಕಳಿಗೆ ಪ್ರವೇಶವಿಲ್ಲದ ಕಾರಣದಿಂದ ಫ್ಯಾಮಿಲಿ ಆಡಿಯನ್ಸ್ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ನಿರ್ಮಾಪಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’, ವಿಜಯ್ ನಟನೆಯ ‘ಬೀಸ್ಟ್’ ಸೇರಿದಂತೆ ಹೆಚ್ಚಿನ ಹಿಂಸಾತ್ಮಕ ದೃಶ್ಯಗಳನ್ನು ಹೊಂದಿದ್ದ ಸಿನಿಮಾಗಳು ಕೂಡ ‘ಯು/ಎ’ ಪ್ರಮಾಣಪತ್ರ ಪಡೆದಿದ್ದವು. ಹೀಗಿರುವಾಗ ‘ಕೂಲಿ’ಗೆ ಮಾತ್ರ ‘ಎ’ ಪ್ರಮಾಣಪತ್ರ ನೀಡಿರುವುದು ನ್ಯಾಯಸಮ್ಮತವೇ ಎಂಬ ಪ್ರಶ್ನೆ ನಿರ್ಮಾಪಕರ ಮುಂದೆ ಮೂಡಿದೆ.
ನಿರ್ಮಾಪಕರಾದ ಸನ್ ಪಿಕ್ಚರ್ಸ್ ಈಗ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ. ಪ್ರಮಾಣಪತ್ರ ನೀಡುವಲ್ಲಿ ಸಮಾನ ಮಾನದಂಡಗಳನ್ನು ಅನುಸರಿಸಿಲ್ಲವೆಂಬ ಆಕ್ಷೇಪವನ್ನು ಅವರು ನ್ಯಾಯಾಲಯದಲ್ಲಿ ಮುಂದಿಟ್ಟಿದ್ದಾರೆ.