ಸಂಬಂಧವನ್ನು ಬಲಪಡಿಸಲು ಕೇವಲ “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳುವುದೇ ಸಾಕಾಗುವುದಿಲ್ಲ. ಕೆಲವರಿಗೆ ಮಾತು ಮುಖ್ಯವಾಗಿರಬಹುದು, ಕೆಲವರಿಗೆ ಸಮಯ, ಮತ್ತೊಬ್ಬರಿಗೆ ಸೇವೆ ಅಥವಾ ಉಡುಗೊರೆ. ಅರ್ಥಾತ್ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನ ಪ್ರತಿಯೊಬ್ಬರಿಗೂ ವಿಭಿನ್ನ. ಈ ವೈವಿಧ್ಯತೆಯನ್ನು ಮನೋವಿಜ್ಞಾನಿ ಗೆರಿ ಚಾಪ್‌ಮನ್ ಅವರು “ಲವ್ ಲ್ಯಾಂಗ್ವೇಜಸ್” ಎಂಬ ತತ್ವದಲ್ಲಿ ವಿವರಿಸಿದ್ದಾರೆ. ಸಂಗಾತಿಯ ಮನಸ್ಸಿಗೆ ತಲುಪುವ ಮಾರ್ಗವನ್ನು ಅರಿತು, ಅದೇ ರೀತಿಯಲ್ಲಿ ಪ್ರೀತಿಯನ್ನು ಹಂಚಿಕೊಂಡರೆ ಸಂಬಂಧ ಹೆಚ್ಚು ಗಾಢವಾಗುತ್ತದೆ.
ಉದಾಹರಣೆಗೆ, ಕೆಲವರಿಗೆ ತಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯುವುದು ಮುಖ್ಯ. ಕೆಲವರಿಗೆ ಚಿಕ್ಕ ಹೊಗಳಿಕೆಯ ಮಾತುಗಳು ಹೃದಯ ಮುಟ್ಟುತ್ತವೆ. ಇನ್ನೂ ಕೆಲವರು ಸೇವಾ ಮನೋಭಾವದಿಂದ ತೃಪ್ತರಾಗುತ್ತಾರೆ. ಇನ್ನು ಕೆಲವರಿಗೆ ದೈಹಿಕ ಸ್ಪರ್ಶವೇ ಪ್ರೀತಿಯ ನಿಜವಾದ ಭಾವನೆ. ಕೆಲವರಿಗೆ ಸಣ್ಣ ಉಡುಗೊರೆಗಳು ಅನಿರೀಕ್ಷಿತ ಸಂತೋಷ ತರುತ್ತವೆ. ಹೀಗಾಗಿ, ಯಾವುದು ನಿಮ್ಮ ಸಂಗಾತಿಯ ಪ್ರೀತಿಯ ಭಾಷೆ ಎಂದು ತಿಳಿದುಕೊಂಡು, ಅದೇ ರೀತಿಯಲ್ಲಿ ಅವರನ್ನು ಗಮನಿಸುವುದು ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ.
ಸಮಯ ಮೀಸಲಿಡಿ ಸಂಗಾತಿಯೊಂದಿಗೆ ಕಳೆಯುವ ಗುಣಮಟ್ಟದ ಸಮಯವೇ ಸಂಬಂಧಕ್ಕೆ ಬಲ ಕೊಡುತ್ತದೆ. ಊಟದ ಸಮಯದಲ್ಲಿ ಫೋನ್‌ನ್ನು ಪಕ್ಕಕ್ಕೆ ಇಟ್ಟು ಮಾತಾಡುವುದು, ವಾರಾಂತ್ಯದಲ್ಲಿ ಸಿನಿಮಾ ನೋಡುವುದು, ಅಥವಾ ಕಾಫಿ ಜೊತೆ ಸಂಜೆ ಸಮಯ ಕಳೆಯುವುದು – ಇವೆಲ್ಲವೂ ನಿಮ್ಮ ನಿಸ್ವಾರ್ಥ ಪ್ರೀತಿಯ ಸಂದೇಶವನ್ನು ನೀಡುತ್ತವೆ.
ಹೊಗಳಿಕೆಯ ಮಾತು “ನಿನ್ನ ಡ್ರೆಸ್ ಚೆನ್ನಾಗಿದೆ”, “ನೀನು ಮಾಡಿದ ಕೆಲಸ ತುಂಬಾ ಒಳ್ಳೆದಿದೆ” – ಇಂತಹ ಚಿಕ್ಕ ಮಾತುಗಳು ದೊಡ್ಡ ಪರಿಣಾಮ ಬೀರುತ್ತವೆ. ಇವು ಆತ್ಮವಿಶ್ವಾಸವನ್ನು ಹೆಚ್ಚಿಸಿ, ಸಂಬಂಧದಲ್ಲಿ ಗೌರವದ ಭಾವನೆಯನ್ನು ತರುತ್ತವೆ.
ಸೇವಾ ಮನೋಭಾವ ಸಣ್ಣ ಸಹಾಯಗಳೇ ದೊಡ್ಡ ಪ್ರೀತಿಯ ಸಾಕ್ಷಿ. ಒಂದು ಕಪ್ ಚಹಾ ಮಾಡಿ ಕೊಡುವುದು, ಮನೆ ಕೆಲಸದಲ್ಲಿ ಕೈಜೋಡಿಸುವುದು, ನೆಚ್ಚಿನ ಊಟ ತಯಾರಿಸುವುದು – ಇವು “ನಾನು ನಿನ್ನೊಂದಿಗೆ ಇದ್ದೇನೆ” ಎಂಬ ಭರವಸೆಯನ್ನು ನೀಡುತ್ತವೆ.
ದೈಹಿಕ ಸ್ಪರ್ಶ ಕೈ ಹಿಡಿಯುವುದು, ಬೆಚ್ಚಗಿನ ಅಪ್ಪುಗೆ, ಭುಜದ ಮೇಲೆ ಕೈ ಇಡುವುದು– ಇವು ಮಾತಿಗಿಂತಲೂ ಹೆಚ್ಚು ಪ್ರೀತಿ ಸಾರುತ್ತವೆ. ಈ ರೀತಿಯ ಸ್ಪರ್ಶವು ಭದ್ರತೆ ಮತ್ತು ಆಪ್ತತೆಯನ್ನು ತರುತ್ತದೆ.
ಉಡುಗೊರೆಯ ಮೂಲಕ ಪ್ರೀತಿ ದುಬಾರಿ ಉಡುಗೊರೆ ಅಗತ್ಯವಿಲ್ಲ. ಒಂದು ಚಾಕೊಲೇಟ್, ಒಂದು ಸಸಿ, ಅಥವಾ ಇಷ್ಟದ ಪುಸ್ತಕ – ಇಂತಹ ಸಣ್ಣ ಉಡುಗೊರೆಗಳು ಸಂಗಾತಿಗೆ “ನೀನು ನನ್ನ ಆದ್ಯತೆ” ಎಂಬ ಸಂದೇಶವನ್ನು ನೀಡುತ್ತವೆ.