ತೂಕ ನಿಯಂತ್ರಣದಲ್ಲಿರಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಹೊಟ್ಟೆ ಹಸಿವು ಬಂದಾಗ ನಿಯಂತ್ರಣ ಸಾಧಿಸುವುದು ಸುಲಭದ ಕೆಲಸವಲ್ಲ. ಅನೇಕರಿಗೆ “ತಿನ್ನಬೇಕು ಆದರೆ ತೂಕ ಹೆಚ್ಚಬಾರದು” ಎಂಬ ದ್ವಂದ್ವ ಕಾಡುತ್ತದೆ. ಈ ಕಾರಣದಿಂದ ಕೆಲವರು ಹಸಿವಿದ್ದರೂ ತಿನ್ನದೆ ಇರುತ್ತಾರೆ. ಕೆಲವರು ಅತಿಯಾಗಿ ತಿಂದ ನಂತರ ಪಶ್ಚಾತ್ತಾಪ ಪಡುತ್ತಾರೆ. ಆದರೆ ತೂಕ ಹೆಚ್ಚಿಸದೇ ಹೊಟ್ಟೆ ತುಂಬಿಸುವಂತಹ ಆಹಾರಗಳೂ ನಮ್ಮ ಸುತ್ತಲಿವೆ. ಇವು ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ಹಸಿವನ್ನು ತಣಿಸುವುದರ ಜೊತೆಗೆ ದೇಹದ ತೂಕವನ್ನು ಸಮತೋಲನದಲ್ಲಿಡುತ್ತವೆ. ನಿಯಮಿತವಾಗಿ ಇವುಗಳನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಶಕ್ತಿಯೂ ದೊರೆಯುತ್ತದೆ, ತೂಕ ನಿಯಂತ್ರಣದಲ್ಲಿಯೂ ಇರುತ್ತದೆ.
ಓಟ್ಸ್
ಓಟ್ಸ್ ಆರೋಗ್ಯಕರ ಕಾರ್ಬೋಹೈಡ್ರೇಟುಗಳಿಂದ ಕೂಡಿದೆ. ಇದನ್ನು ಬೆಳಗಿನ ಉಪಾಹಾರದಲ್ಲಿ ಹಣ್ಣು ಹಾಗೂ ಹಾಲಿನೊಂದಿಗೆ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಜೊತೆಗೆ ಇದು ಹೆಚ್ಚು ಸಮಯ ಹಸಿವನ್ನು ತಣಿಸುವುದರಿಂದ ಜಂಕ್ ಫುಡ್ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ.
ಪಾಪ್ ಕಾರ್ನ್
ಪಾಪ್ ಕಾರ್ನ್ ಕಡಿಮೆ ಕ್ಯಾಲೋರಿ ಹೊಂದಿರುವ ಉತ್ತಮ ಸ್ನ್ಯಾಕ್. ಬೆಣ್ಣೆ, ಎಣ್ಣೆ ಹಾಕದೆ ಸರಳವಾಗಿ ಮಾಡಿದ ಪಾಪ್ ಕಾರ್ನ್ ತೂಕ ನಿಯಂತ್ರಣಕ್ಕೆ ಸಹಕಾರಿ. ಇದರಿಂದ ಹೊಟ್ಟೆ ತುಂಬುತ್ತದೆ ಆದರೆ ತೂಕ ಹೆಚ್ಚುವ ಸಾಧ್ಯತೆ ಕಡಿಮೆ.
ಅವಕಾಡೊ
ಅವಕಾಡೊ ದೇಹಕ್ಕೆ ಒಳ್ಳೆಯ ಕೊಬ್ಬುಗಳನ್ನು (good fats) ಪೂರೈಸುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವ ದೊರೆಯುತ್ತದೆ. ಹಸಿವನ್ನು ನಿಯಂತ್ರಿಸುವ ಗುಣ ಹೊಂದಿರುವುದರಿಂದ ತೂಕ ಹೆಚ್ಚದಂತೆ ನೋಡಿಕೊಳ್ಳುತ್ತದೆ.
ಮೊಸರು
ಕಡಿಮೆ ಕ್ಯಾಲೋರಿ ಹೊಂದಿರುವ ಮೊಸರು ದೇಹಕ್ಕೆ ಶೀತಲತೆ ನೀಡುವುದರ ಜೊತೆಗೆ ಹಸಿವನ್ನು ತಣಿಸುತ್ತದೆ. ವಿಶೇಷವಾಗಿ ಕೆನೆ ತೆಗೆದ ಮೊಸರು (low-fat curd) ಹೆಚ್ಚು ಸೂಕ್ತ. ಲಸ್ಸಿ ರೂಪದಲ್ಲಿ ಕುಡಿದರೂ ತೂಕ ಹೆಚ್ಚಿವ ಭಯವಿಲ್ಲ.
ಪೀನಟ್ ಬಟರ್
ಪೀನಟ್ ಬಟರ್ ಪ್ರೋಟೀನ್ ಹಾಗೂ ಉತ್ತಮ ಕೊಬ್ಬಿನ ಮೂಲ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ತುಂಬಿಸುವುದರ ಜೊತೆಗೆ ತೂಕ ಹೆಚ್ಚಿಸುವುದಿಲ್ಲ. ಮಕ್ಕಳಿಗೂ ದೊಡ್ಡವರಿಗೂ ಶಕ್ತಿದಾಯಕ ಆಹಾರವಾಗಿದೆ.
ಹಣ್ಣುಗಳು
ಹಣ್ಣುಗಳು ಸಹಜವಾಗಿ ಫೈಬರ್ ಹಾಗೂ ವಿಟಮಿನ್ಗಳನ್ನು ಹೊಂದಿರುತ್ತವೆ. ಕಾಲಾನುಗುಣ ಹಣ್ಣುಗಳನ್ನು ಸೇವಿಸಿದರೆ ಹಸಿವನ್ನು ತಣಿಸಿ ದೇಹವನ್ನು ಸಮತೋಲನದಲ್ಲಿ ಇಡುತ್ತವೆ. ತೂಕ ನಿಯಂತ್ರಣಕ್ಕೆ ಹಣ್ಣುಗಳು ಅತ್ಯುತ್ತಮ.