ಏಷ್ಯಾಕಪ್ ತಂಡದ ಆಯ್ಕೆ ಬಗ್ಗೆ ಕ್ರಿಸ್ ಶ್ರೀಕಾಂತ್ ಅಸಮಾಧಾನ: ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾ ಏಷ್ಯಾಕಪ್‌ಗಾಗಿ 15 ಸದಸ್ಯರ ತಂಡವನ್ನು ಘೋಷಿಸಿದೆ. ಆದರೆ ಈ ತಂಡದ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಈ ತಂಡ ಏಷ್ಯಾಕಪ್ ಗೆಲ್ಲಲು ಸಮರ್ಥವಾಗಿರಬಹುದು, ಆದರೆ ಇದೇ ತಂಡದೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವುದು ಅಸಾಧ್ಯ ಎಂದಿದ್ದಾರೆ.

ಏಷ್ಯಾಕಪ್ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ದೊಡ್ಡ ಸವಾಲಾಗಿ ಎದುರಾಗಲಿದೆ. ಶ್ರೀಕಾಂತ್ ಅಭಿಪ್ರಾಯದ ಪ್ರಕಾರ, ಟೀಮ್ ಇಂಡಿಯಾ ಈಗಾಗಲೇ ವಿಶ್ವಕಪ್ ತಯಾರಿಯನ್ನು ಪ್ರಾರಂಭಿಸಬೇಕಿತ್ತು. ಆದರೆ ಆಯ್ಕೆ ಮಾಡಿರುವ ಈ ತಂಡದಲ್ಲಿ ವಿಶ್ವಕಪ್ ಗೆಲ್ಲಲು ಬೇಕಾದ ಬಲವಿಲ್ಲ.

ಇತ್ತೀಚಿನವರೆಗೆ ಉಪನಾಯಕತ್ವ ವಹಿಸಿದ್ದ ಅಕ್ಷರ್ ಪಟೇಲ್ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಲಾಗಿದೆ. ರಿಂಕು ಸಿಂಗ್, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಅವರನ್ನು ಯಾಕೆ ಆಯ್ಕೆ ಮಾಡಲಾಗಿದೆ ಎಂಬುದರ ಕುರಿತು ಶ್ರೀಕಾಂತ್ ಪ್ರಶ್ನೆ ಎತ್ತಿದ್ದಾರೆ. ಆಯ್ಕೆದಾರರು ಐಪಿಎಲ್ ಪ್ರದರ್ಶನವನ್ನೇ ಮಾನದಂಡವನ್ನಾಗಿ ಪರಿಗಣಿಸಿದ್ದಾರಾ ಅಥವಾ ಹಳೆಯ ಸಾಧನೆಯನ್ನು ಗಮನದಲ್ಲಿಟ್ಟುಕೊಂಡಿದ್ದಾರಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ತಂಡದಲ್ಲಿ ಐದನೇ ಕ್ರಮಾಂಕದಲ್ಲಿ ಸಹಜ ಬ್ಯಾಟರ್ ಕೊರತೆ ಇದೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಶಿವಂ ದುಬೆ ಈ ಸ್ಥಾನದಲ್ಲಿ ಆಡಿದರೂ, ಆ ಸ್ಥಾನಕ್ಕೆ ಇನ್ನೂ ಸ್ಪಷ್ಟತೆ ಇಲ್ಲ. ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರಿಂಕು ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಪೈಪೋಟಿ ಇರುವುದರಿಂದ ಸಮತೋಲನ ಕಳೆದುಕೊಂಡಂತೆ ತೋರುತ್ತಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಕೈಬಿಟ್ಟಿರುವ ನಿರ್ಧಾರಕ್ಕೂ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಈ ನಿರ್ಧಾರ ಸಮಂಜಸವಲ್ಲ.

ಶ್ರೀಕಾಂತ್ ಅಭಿಪ್ರಾಯದ ಪ್ರಕಾರ, ಭಾರತ ತಂಡ ಏಷ್ಯಾಕಪ್ ಗೆಲ್ಲುವ ಸಾಧ್ಯತೆಯಿದ್ದರೂ, ಟಿ20 ವಿಶ್ವಕಪ್‌ನಲ್ಲಿ ಇದೇ ತಂಡದಿಂದ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವುದು ಕಷ್ಟ. ಆಟಗಾರರ ಆಯ್ಕೆಯಲ್ಲಿ ಸಮತೋಲನದ ಕೊರತೆ ಮತ್ತು ಪ್ರಮುಖ ಸ್ಥಾನಗಳಲ್ಲಿ ಅನುಭವಿಗಳ ಕೊರತೆ ತಂಡದ ಬಲ ಕುಗ್ಗಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!